ಬೆಂಗಳೂರು, (ಜುಲೈ 30): ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ( Mekedatu Project ) ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೆರಿಯಂತಹ ನೆರೆ ರಾಜ್ಯಗಳ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಹೇಳಿತ್ತು. ಇದು ಕರ್ನಾಟಕಕ್ಕೆ ಮತ್ತಷ್ಟು ಬಲ ತಂದಿತ್ತು. ಆದ್ರೆ, ಇದೀಗ ಇದೇ ಕೇಂದ್ರ ಜಲ ಆಯೋಗ (CWC) ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿ (DPR)ಯನ್ನು ವಾಪಸ್ ಕಳುಹಿಸಿದೆ. ಯೋಜನಾ ಪ್ರಸ್ತಾವನೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (CWDT) ನೀಡಿರುವ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ನೀರಿನ ಬಳಕೆಯ ಪ್ರಮಾಣ ಹೆಚ್ಚಿಸಿದ್ದ ಕರ್ನಾಟಕ ಸರ್ಕಾರ, ಬೆಂಗಳೂರಿನ ಕುಡಿಯುವ ನೀರಿಗಾಗಿ 6.95 TMC ನೀರು ಕೇಳಿತ್ತು. ಹೀಗಾಗಿ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಕೇಳಿರುವ ಕೇಂದ್ರ ಜಲ ಆಯೋಗ, ಡಿಪಿಆರ್ ಅನ್ನು ವಾಪಸ್ ಕಳುಹಿಸಿದ್ದು, ಡಿಪಿಆರ್ನಲ್ಲಿರುವ ಕೆಲ ಅಂಶ ಮಾರ್ಪಡಿಸಿ ಪರಿಷ್ಕೃತ ವಿಸ್ತ್ರತ ಯೋಜನಾ ವರದಿ ಸಲ್ಲಿಸುವಂತೆ ಸಿಡಬ್ಲ್ಯುಸಿ ಸೂಚಿಸಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ
CWC ಡಿಪಿಆರ್ ವಾಪಸ್ ಕಳುಹಿಸಿದ್ಯಾಕೆ?
2018ರಲ್ಲಿ ಕರ್ನಾಟಕವು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ 4.75 ಟಿಎಂಸಿ ಅಡಿ ನೀರಿನ ಬಳಕೆಯನ್ನು ಪ್ರಸ್ತಾಪಿಸಿ, ಸುಮಾರು 23.75 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಡಿಪಿಆರ್ ಸಲ್ಲಿಸಿ ತಾತ್ವಿಕ ಒಪ್ಪಿಗೆ ಪಡೆದಿತ್ತು.ಆದರೆ, 2026ರ ಏಪ್ರಿಲ್ನಲ್ಲಿ ಸಲ್ಲಿಸಿದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಬಳಕೆಯ ಪ್ರಮಾಣವನ್ನು 6.95 ಟಿಎಂಸಿ ಅಡಿಗೆ ಹೆಚ್ಚಿಸಲಾಗಿದೆ. ಕಾವೇರಿಗೆ ಅಡ್ಡಲಾಗಿ ತಿರುವು ತಡೆಗೋಡೆ ನಿರ್ಮಿಸುವ ಶಿವನಸಮುದ್ರ ನದಿ ಹರಿವು ವಿದ್ಯುತ್ ಯೋಜನೆಯನ್ನು ಹೊಸ ಘಟಕವಾಗಿ ಡಿಪಿಆರ್ನಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ ಸೇರಿಸಲಾಗಿದೆ.
2044ರ ವೇಳೆಗೆ ಬೆಂಗಳೂರಿನ ನೀರಿನ ಅಗತ್ಯ 64 ಟಿಎಂಸಿ ಅಡಿ ಎಂದು ಅಂದಾಜಿಸಿರುವ ರಾಜ್ಯ ಸರ್ಕಾರ, 1990ರ ಹಳೆಯ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡಿದೆ. ಆದರೆ ಸುಪ್ರೀಂ ಕೋರ್ಟ್ ತನ್ನ 2018ರ ತೀರ್ಪಿನಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಒಟ್ಟು ಕುಡಿಯುವ ನೀರಿನ ಅಗತ್ಯವನ್ನು 33 ಟಿಎಂಸಿ ಅಡಿಗೆ (ಬೆಂಗಳೂರಿಗೆ ಮಾತ್ರ 24 ಟಿಎಂಸಿ ಅಡಿ) ಮಿತಿಗೊಳಿಸಿದೆ.
ಒಟ್ಟು 59.46 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಕರ್ನಾಟಕದ ಸಮರ್ಥನೆಯು ಪ್ರಸ್ತುತ ದತ್ತಾಂಶಗಳಿಲ್ಲದೆ ಹಳೆಯ ಅಂಕಿಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.