ನವದೆಹಲಿ, ಜುಲೈ 31: ಭಾರತದ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಲಾರ್ಸನ್ ಅಂಡ್ ಟೂಬ್ರೊ (L&T) ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬೃಹತ್ ಹೆಜ್ಜೆ ಇಟ್ಟಿದ್ದು, ₹5,000 ಕೋಟಿ ಹೂಡಿಕೆ ಯೊಂದಿಗೆ ಹೊಸ ಎಲೆಕ್ಟ್ರಾನಿಕ್ಸ್ ವ್ಯವಹಾರವನ್ನು ಪ್ರಾರಂಭಿಸಿದೆ. ತನ್ನ ‘L&T ಎಲೆಕ್ಟ್ರಾನಿಕ್ ಪ್ರೊಡಕ್ಟ್ಸ್ ಅಂಡ್ ಸಿಸ್ಟಮ್ಸ್ (EPS)’ ವಿಭಾಗದ ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಹೂಡಿಕೆ ಮಾಡಲಿದೆ.
ಈ ಬಂಡವಾಳವನ್ನು ಅತ್ಯಾಧುನಿಕ ತಯಾರಿಕಾ ಘಟಕಗಳು (Manufacturing Hubs), ಸಂಶೋಧನೆ ಮತ್ತು ಅಭಿವೃದ್ಧಿ (R&D), ಪರೀಕ್ಷಾ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಒಪ್ಪಂದಗಳಿಗಾಗಿ ಬಳಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
$4.85 ಬಿಲಿಯನ್ ಮಾರುಕಟ್ಟೆ ಗುರಿ
ಕಂಪನಿಯು ಭಾರತದಲ್ಲಿ ಸದ್ಯ $2 ಬಿಲಿಯನ್ ಡಾಲರ್ನಷ್ಟಿದ್ದು, 2031ರ ವೇಳೆಗೆ $4.85 ಬಿಲಿಯನ್ (ಅಂದಾಜು ₹47,000 ಕೋಟಿಗೂ ಹೆಚ್ಚು) ಬೆಳೆಯುವ ನಿರೀಕ್ಷೆಯಿರುವ ಕೈಗಾರಿಕಾ B2B ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ
ಈ ಹೊಸ ವಲಯಗಳಲ್ಲಿ 10% ರಿಂದ 15% ಮಾರುಕಟ್ಟೆ ಪಾಲನ್ನು (Market Share) ಗಳಿಸುವ ಗುರಿಯನ್ನು L&T ಹೊಂದಿದೆ.
ಪ್ರಮುಖ ಉತ್ಪನ್ನಗಳು ಹಾಗೂ ಕ್ಷೇತ್ರಗಳು
ಗ್ರಾಹಕ ಎಲೆಕ್ಟ್ರಾನಿಕ್ಸ್ (Consumer Electronics) ಬದಲು ಹೆಚ್ಚಿನ ಮೌಲ್ಯದ ಮತ್ತು ತಾಂತ್ರಿಕ ಎಲೆಕ್ಟ್ರಾನಿಕ್ಸ್ ವ್ಯವಹಾರಗಳ ಮೇಲೆ L&T ಗಮನಹರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ (EV) ಮೋಟಾರ್ಗಳು, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), ಕನೆಕ್ಟೆಡ್ ವೆಹಿಕಲ್ ಟೆಕ್ನಾಲಜಿ, ಪವರ್ ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಆಟೊಮೇಷನ್, ರೋಬೋಟಿಕ್ಸ್, ನವೀಕರಿಸಬಹುದಾದ ಇಂಧನ ನಿಯಂತ್ರಣ ವ್ಯವಸ್ಥೆಗಳು, ಡಿಫೆನ್ಸ್/ಏರೋಸ್ಪೇಸ್ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನದ ಕಡೆ ಎಲ್ ಅಂಡ್ ಟಿ ಗಮನ ಹರಿಸಲು ನಿಶ್ಚಯಿಸಿದೆ.
ಬೆಂಗಳೂರಿನಲ್ಲಿ ಆರ್ ಅಂಡ್ ಡಿ ಸೆಂಟರ್
ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಲ್ ಅಂಡ್ ಟಿಯ ಹೊಸ ಮ್ಯಾನುಫ್ಯಾಕ್ಚರಿಂಗ್ ಸೆಂಟರ್ ಮತ್ತು ಸರ್ಕಿಟ್ ಬೋರ್ಡ್ ಅಸೆಂಬ್ಲಿ ಲೈನ್ ಈಗಾಗಲೇ ಕಾರ್ಯಾರಂಭ ಮಾಡಿದೆ. ಈ ಯೋಜನೆಯಿಂದ ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ಬೆಂಗಳೂರು, ಕೊಯಮತ್ತೂರಿನಲ್ಲಿರುವ ಅದರ ಸಂಶೋಧನಾ ಕೇಂದ್ರಗಳು ಮತ್ತು ಚೆನ್ನೈ ಬಳಿಯ ಬ್ಯಾಟರಿ ಎನರ್ಜಿ ಸ್ಟೋರೇಜ್ ಸೌಲಭ್ಯಗಳು ಈ ಯೋಜನೆಗೆ ಸಾಥ್ ನೀಡಲಿವೆ.
ಇದನ್ನೂ ಓದಿ: ದೊಡ್ಡ ಡೆಪಾಸಿಟ್ಗಳಿಗೆ ತಮ್ಮದೇ ಬಡ್ಡಿದರ ನಿಗದಿ ಮಾಡಲು ಬ್ಯಾಂಕುಗಳಿಗೆ ಆರ್ಬಿಐ ಅನುಮತಿ
ದೇಶೀಯ ಪೂರೈಕೆ ಜಾಲ ಬೇಕು
‘ವಾಹನ ಎಲೆಕ್ಟ್ರಾನಿಕ್ಸ್ನ ಮುಖ್ಯ ತಂತ್ರಜ್ಞಾನವು ಭಾರತದಲ್ಲಿ ಇಲ್ಲದಿರುವುದು ಕಂಡು ಬಂತು. ಎಲ್ಲಾ ಟಿಯರ್-1 ಪೂರೈಕೆದಾರರು ಹೊರಗಿನಿಂದ ಟೆಕ್ನಾಲಜಿ ತರುವಂತಹ ಎಂಎನ್ಸಿಗಳೇ ಆಗಿವೆ. ಭಾರತೀಯ ಮಾರುಕಟ್ಟೆಯ ಅಗತ್ಯಗಳಿಗೆ ಇವು ಪೂರ್ಣವಾಗಿ ಹೊಂದಿಕೆಯಾಗಿರುವುದಿಲ್ಲ’ ಎಂದು ಎಲ್ ಅಂಡ್ ಟಿ ವ್ಯೋಮಾದ ಎಂಡಿ ಪ್ರಶಾಂತ್ ಜೈನ್ ಹೇಳಿದ್ದಾರೆ.
ಈ ಹೂಡಿಕೆಯು L&T ಸಂಸ್ಥೆಯನ್ನು ಸಾಂಪ್ರದಾಯಿಕ ಇಪಿಸಿ (EPC) ಕಾಮಗಾರಿಗಳಿಂದ ಉನ್ನತ ತಂತ್ರಜ್ಞಾನದ ಹಾರ್ಡ್ವೇರ್ ತಯಾರಿಕಾ ಕ್ಷೇತ್ರಕ್ಕೆ ಪರಿವರ್ತಿಸುವ ಪ್ರಮುಖ ಕಾರ್ಯತಂತ್ರದ ಭಾಗವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ