ರಾಮ್ ಗೋಪಾಲ್ ವರ್ಮಾ (Ram Gopal Varma), ಒಂದು ಕಾಲದ ಸೂಪರ್ ಸ್ಟಾರ್ ನಿರ್ದೇಶಕ. ವರ್ಮಾ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದ್ದ ಸಮಯವೊಂದಿತ್ತು. ಸಿನಿಮಾ ನಿರ್ದೇಶನದಲ್ಲಿ ಹೊಸ ಭಾಷ್ಯವನ್ನೇ ಬರೆದ ನಿರ್ದೇಶಕ ಎನಿಸಿಕೊಂಡಿದ್ದರು. ಆದರೆ ಈಗ ವರ್ಮಾ, ಸಾಫ್ಟ್ ಪಾರ್ನ್ ರೀತಿಯ ಸಿನಿಮಾಗಳು, ಪೊಲಿಟಿಕಲ್ ಸಟೈರ್ ಮಾದರಿಯ ಕ್ರಿಂಜ್ ಸಿನಿಮಾಗಳನ್ನಷ್ಟೆ ನಿರ್ದೇಶಿಸುತ್ತಿದ್ದಾರೆ. ಆದರೆ ವರ್ಮಾ, ಸ್ಟಾರ್ ಆಗಿದ್ದಾಗ ಆಗಿನ ಹಲವು ಸೂಪರ್ ಸ್ಟಾರ್ ನಟಿಯರೊಟ್ಟಿಗೆ ಕೆಲಸ ಮಾಡಿದ್ದರು. ಅವರಲ್ಲಿ ಒಬ್ಬರನ್ನು ಗುಟ್ಟಾಗಿ ಮದುವೆ ಸಹ ಆಗಿದ್ದರು ಎನ್ನಲಾಗುತ್ತದೆ. ಇದೀಗ ನಟಿಯೊಬ್ಬರು, ಆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರ ಮೆಚ್ಚಿನ ನಾಯಕಿಯರಲ್ಲಿ ಊರ್ಮಿಳಾ ಮತೋಂಡ್ಕರ್ ಸಹ ಒಬ್ಬರು. ಅವರೊಟ್ಟಿಗೆ ಹಲವು ಸಿನಿಮಾಗಳನ್ನು ರಾಮ್ ಗೋಪಾಲ್ ವರ್ಮಾ ಮಾಡಿದ್ದಾರೆ. ಇಬರಿಬ್ಬರೂ ಗುಟ್ಟಾಗಿ ಮದುವೆ ಆಗಿದ್ದರು ಎಂಬ ಸುದ್ದಿ ಆಗ ಹರಿದಾಡಿತ್ತು. ಇಬ್ಬರ ಅಫೇರ್ ಸುದ್ದಿಗಳು ಸದಾ ಚರ್ಚೆಯಲ್ಲಿರುತ್ತಿದ್ದವು. ಆದರೂ, ಅವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಅಧಿಕೃತವಾಗಿ ಬಾಯಿಬಿಟ್ಟಿರಲಿಲ್ಲ. ಹಿರಿಯ ಪತ್ರಕರ್ತರೊಬ್ಬರು ರಾಮ್ ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಮತೋಂಡ್ಕರ್ ಗುಟ್ಟಾಗಿ ಮದುವೆ ಆಗಿದ್ದರು ಎಂದಿದ್ದಾರೆ. ಆ ಮೂಲಕ ಹಳೆಯ ಗಾಸಿಪ್ಗೆ ಮರು ಜೀವ ನೀಡಿದ್ದಾರೆ.
ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿರುವ ಪತ್ರಕರ್ತ ಜ್ಯೋತಿ ವೆಂಕಟೇಶ್, ಉರ್ಮಿಳಾ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಸಂಬಂಧದ ಬಗ್ಗೆ ಹೇಳಿದ್ದಾರೆ. ಆ ಕಾಲದಲ್ಲಿ ತಾವು ಆ ಇಬ್ಬರ ಸಂಬಂಧದ ಬಗ್ಗೆ ಬರೆಯುತ್ತಿದ್ದೆವು, ಆದರೆ ಈ ಸುದ್ದಿಯನ್ನು ಪ್ರಕಟಿಸದಂತೆ ಎರಡೂ ಕಡೆಯಿಂದಲೂ ಒತ್ತಡವಿತ್ತು ಎಂದು ಅವರು ತಿಳಿಸಿದರು. ಅಷ್ಟೇ ಅಲ್ಲದೆ, ಒಮ್ಮೆ ತಮ್ಮ ಭೇಟಿ ನಟ ಚಿರಂಜೀವಿ ಅವರೊಂದಿಗೆ ಆಗಿತ್ತು. ಅವರು ‘ಜೆಂಟಲ್ಮನ್‘ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆಗ ಅವರು ನನಗೆ, ‘ನೀವು ರಾಮ್ ಗೋಪಾಲ್ ವರ್ಮಾ ಮತ್ತು ಉರ್ಮಿಳಾ ಬಗ್ಗೆ ಇಷ್ಟೆಲ್ಲಾ ಬರೆಯುತ್ತೀರಿ, ಆದರೆ ಅವರು ಮದುವೆಯಾಗಿದ್ದಾರೆ ಎಂದು ಏಕೆ ಬರೆಯುತ್ತಿಲ್ಲ?’ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ:ರಣವೀರ್ ಸಿಂಗ್ ಬ್ಯಾನ್ ಮಾಡಿದ್ದಕ್ಕೆ ಗರಂ ಆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಇದನ್ನು ಕೇಳಿ ಜ್ಯೋತಿ ಅವರು, ನನಗೆ ಅಫೇರ್ ಬಗ್ಗೆ ಗೊತ್ತಿತ್ತು, ಆದರೆ ಮದುವೆ ಯಾವಾಗ ಮತ್ತು ಎಲ್ಲಿ ಆಯಿತು? ಎಂದು ಮರುಪ್ರಶ್ನಿಸಿದರು. ಅದಕ್ಕೆ ಚಿರಂಜೀವಿ, ಇಬ್ಬರೂ ಆಂಧ್ರಪ್ರದೇಶದ ಒಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎಂದು ಹೇಳಿದರು. ಅಷ್ಟೇ ಅಲ್ಲ, ಮದುವೆ ಮಾಡಿಸಿದ್ದ ವ್ಯಕ್ತಿಯ ಸಂಪರ್ಕ ಸಂಖ್ಯೆಯನ್ನೂ ಅವರು ನೀಡಿದ್ದರು ಎಂದು ಜ್ಯೋತಿ ವೆಂಕಟೇಶ್ ಉಲ್ಲೇಖಿಸಿದ್ದಾರೆ.
ಇದಾದ ಬಳಿಕ ಜ್ಯೋತಿ ವೆಂಕಟೇಶ್ ಅವರು ಒಂದು ಮ್ಯಾಗಜಿನ್ನಲ್ಲಿ ಇಬ್ಬರ ಮದುವೆಯ ಸುದ್ದಿಯನ್ನು ಪ್ರಕಟಿಸಿದರು. ಆದರೆ ಸುದ್ದಿ ಮುದ್ರಿಸುವ ಮುನ್ನ ಅವರು ಉರ್ಮಿಳಾ ಮಾತೋಂಡ್ಕರ್ ಅವರನ್ನು ಸಂಪರ್ಕಿಸಿದ್ದರು. ಜ್ಯೋತಿ ಅವರ ಪ್ರಕಾರ, ಫೋನ್ನಲ್ಲಿ ಉರ್ಮಿಳಾ ಭಾವುಕರಾಗಿ ಅಳಲು ಶುರು ಮಾಡಿದರು. ‘ನೀವು ನನ್ನನ್ನು ಇಷ್ಟು ವರ್ಷಗಳಿಂದ ಬಲ್ಲಿರಲ್ವಲ್ಲ, ಆದರೂ ನನ್ನ ಬಗ್ಗೆ ಹೀಗೆ ಹೇಗೆ ಬರೆಯಬಹುದು?’ ಎಂದು ಉರ್ಮಿಳಾ ಕೇಳಿದ್ದರಂತೆ.ನಂತರ ಅವರು ರಾಮ್ ಗೋಪಾಲ್ ವರ್ಮಾ ಅವರಿಗೂ ಫೋನ್ ಮಾಡಿದರು. ಆದರೆ ನಿರ್ದೇಶಕರು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ನನಗೆ ಇದರ ಬಗ್ಗೆ ಮಾತನಾಡಲು ಇಷ್ಟವಿಲ್ಲ” ಎಂದು ಅವರು ಹೇಳಿದ್ದಾಗಿ ಜ್ಯೋತಿ ತಿಳಿಸಿದ್ದಾರೆ.
ಊರ್ಮಿಳಾ ಮತೋಂಡ್ಕರ್ ಅವರು ಮೋಹ್ಸಿನ್ ಅಖ್ತರ್ ಅವರನ್ನು ವಿವಾಹವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯೆಯೂ ಆಗಿದ್ದಾರೆ. 2024 ರಲ್ಲಿ ಈ ಇಬ್ಬರು ವಿಚ್ಛೇದನ ಪಡೆದು ದೂರಾದರು. ರಾಮ್ ಗೋಪಾಲ್ ವರ್ಮಾ ಸಹ ಮದುವೆ ಆಗಿದ್ದರು. ಆದರೆ ಸಾಕಷ್ಟು ವರ್ಷಗಳ ಹಿಂದೆಯೇ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ