ಬಾಗಲಕೋಟೆ, ಜುಲೈ 31: ಬಾಗಲಕೋಟೆ (bagalkot) ತಾಲ್ಲೂಕಿನ ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನ ಪ್ರಸಿದ್ಧ ದೇವಸ್ಥಾನ. ಇನ್ನೂ ಮೂರು ತಿಂಗಳಲ್ಲೇ ದೇವಿಯ ಜಾತ್ರೆ ಕೂಡ ನಡೆಯಲಿದೆ. ಆದರೆ ಇದೇ ಸಂದರ್ಭದಲ್ಲಿ ಕೆಲವರು ದೇವಸ್ಥಾನದ ಲೆಕ್ಕ ಕೇಳಿದ ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಕೊಡಲಿ, ರಾಡ್ನಿಂದ ಮಾರಾಮಾರಿ ಉಂಟಾಗಿದೆ. ಸದ್ಯ ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡೆದಿದ್ದೇನು?
ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನದ ಲೆಕ್ಕ ಹಾಗೂ ಹಳೆ ದ್ವೇಷ ಹಿನ್ನೆಲೆ ಭೋಜಪ್ಪ ರಾಠೋಡ್ ಮತ್ತು ಮಂಜುನಾಥ್ ರಾಠೋಡ್ ಎಂಬುವವರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕೊಡಲಿ, ರಾಡ್ನಿಂದ ಬಡಿದಾಡಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಮಂಜುನಾಥ್ ಹಾಗೂ ಅವರ ಗುಂಪಿನ ಏಕನಾಥ್ ರಾಠೋಡ್, ಕಿರಣ್ ರಾಠೋಡ್ ಮೇಲೆ ಹಲ್ಲೆ ಮಾಡಲಾಗಿದೆ. ದೇವಸ್ಥಾನದ ಐದಾರು ಕೆಜಿ ಚಿನ್ನ ಹಾಗೂ ಮೂರು ಕೋಟಿ ರೂ ಹಣದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಹಾಗೂ ಹಳೆ ದ್ವೇಷ ಹಿನ್ನೆಲೆ ಹಲ್ಲೆ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: 40 ಲಕ್ಷ ರೂ ವರದಕ್ಷಿಣೆ, ಸಂಬಳಕ್ಕಾಗಿ ಗಲಾಟೆ: ಚೇಂಬರ್ಗೆ ನುಗ್ಗಿ ಹೆತ್ತ ಮಗಳಿಗೆ ಚಾಕುವಿನಿಂದ ಇರಿದ ತಂದೆ!
ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನ ಬಹಳ ಪ್ರಸಿದ್ಧ ದೇವಸ್ಥಾನ. ಮೂರು ವರ್ಷಕ್ಕೊಮ್ಮೆ ದೇವಿಯ ಜಾತ್ರೆ ನಡೆಯುತ್ತದೆ. ಇನ್ನೇನು ಮೂರು ತಿಂಗಳಲ್ಲಿ ಅದ್ದೂರಿಯಾಗಿ ದುರ್ಗಾದೇವಿ ಜಾತ್ರೆ ನಡೆಯುತ್ತದೆ. ಜಾತ್ರೆ ಹಿನ್ನೆಲೆ ಎದುರಾಳಿ ಗುಂಪಿನ ಭೋಜಪ್ಪ ರಾಠೋಡ್ ದೇವಸ್ಥಾನಕ್ಕೆ ಬಣ್ಣ ಹಚ್ಚುತ್ತಿದ್ದರು. ಇದಕ್ಕೆ ನಿನ್ನೆ ಮಂಜುನಾಥ್ ಹಾಗೂ ಅವರ ಸಹಚರರು ಅಡ್ಡಿಪಡಿಸಿದ್ದಾರೆ.
ಮಾತಿಗೆ ಮಾತು ಬೆಳೆದು ಶುರುವಾದ ಜಗಳ
‘ನಿಮ್ಮ ಅಣ್ಣ ಹಾಗೂ ಕೆಲವರು ದೇವಸ್ಥಾನದ ಲೆಕ್ಕವನ್ನು ಕೊಡಬೇಕು. ಕೆಲಸ ಮಾಡಬೇಡ’ ಎಂದು ತಡೆದಿದ್ದಾರೆ. ಇಂದು ಬೆಳಗ್ಗೆ ಪುನಃ ದೇವಸ್ಥಾನ ಕಡೆ ಬಂದಾಗ ಮಾತಿಗೆ ಮಾತು ಬೆಳೆದು ಶುರುವಾದ ಜಗಳ ಮಾರಾಮಾರಿಗೆ ತಲುಪಿದೆ. ಹೊಡೆದಾಟದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಹೋದರ ಭೋಜಪ್ಪ ರಾಠೋಡ್, ದಾಸು, ಸೋಮಿಬಾಯಿ, ಪಾಪಿಬಾಯಿ, ಕಿರಣ ರಾಠೋಡ್, ವಿಶಾಲ್ ರಾಠೋಡ್ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಭೋಜಪ್ಪ ರಾಠೋಡ್ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಗುಂಪಿನ ಗಾಯಾಳುಗಳನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯನ್ನ ಎಳೆಎಳೆಯಾಗಿ ವಿವರಿಸಿದ ಹೂವಪ್ಪ ರಾಠೋಡ್
ಈ ಬಗ್ಗೆ ಮಾತಾಡಿದ ಹೂವಪ್ಪ ರಾಠೋಡ್, ‘ನಮ್ಮ ಸಹೋದರ ಭೋಜಪ್ಪ ಸ್ವಂತ ಹಣದಿಂದ ದೇವಸ್ಥಾನಕ್ಕೆ ಬಣ್ಣ ಹಚ್ಚಿಸುತ್ತಿದ್ದರು. ನಮ್ಮ ತಾಂಡಾದ ದುರ್ಗಾದೇವಿ ಮಹಿಮೆ ಶಕ್ತಿ ದೊಡ್ಡದು. ದೇವಿಯ ಹಣ ಆಗಲಿ, ಬಂಗಾರ ಆಗಲಿ ಲಪಟಾಯಿಸಿದವರಿಗೆ ಎಂದು ಒಳ್ಳೆಯದಾಗುವುದಿಲ್ಲ. ಆ ದೇವಿಯ ಆಭರಣಗಳನ್ನು ಎಲ್ಲಾ ಗುರುಹಿರಿಯರೇ ಜೋಪಾನವಾಗಿ ಇಟ್ಟುಕೊಳ್ಳಿ ಎಂದು ನಮಗೆ ಕೊಟ್ಟಿದ್ದಾರೆ. ಆ ಪ್ರಕಾರ ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ. ಯಾವುದೇ ಹಣದ ವ್ಯವಹಾರ ಕೂಡ ನಡೆದಿಲ್ಲ. ಸುಮ್ಮನೆ ಕೆಲಸಕ್ಕೆ ಅಡ್ಡಪಡಿಸಿದರು. ದುರುದ್ದೇಶ ಇಟ್ಟುಕೊಂಡು ಬೆಳ್ಳಂಬೆಳಿಗ್ಗೆ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ. ನಾನು ಪೊಲೀಸರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ನಮ್ಮದು ತಪ್ಪಿದ್ದರೆ, ನಮಗೂ ಶಿಕ್ಷೆ ಕೊಡಿ. ಇವರ ಮೇಲೆ ಕ್ರಮಕೈಗೊಳ್ಳಿ’ ಎಂದಿದ್ದಾರೆ.
ಇದನ್ನೂ ಓದಿ: ಶಾಂತವಾಗಿದ್ದ ಕರಾವಳಿಯಲ್ಲಿ ಗುಂಡಿನ ಸದ್ದು: ಹರಿಯಿತು ಉದ್ಯಮಿಯ ನೆತ್ತರ ಕೋಡಿ
ಒಟ್ಟಿನಲ್ಲಿ ದೇವಸ್ಥಾನದ ಲೆಕ್ಕ ಹಾಗೂ ಹಳೆ ದ್ವೇಷ ಎರಡು ಗುಂಪಿನ ಮಧ್ಯೆ ಮಾರಾಮಾರಿಗೆ ಕಾರಣವಾಗಿದೆ. ಜಾತ್ರೆ ಸಮೀಪ ಇರುವ ದಿನದಲ್ಲಿ ಇಂತಹ ಗಲಾಟೆ ನಡೆದಿದೆ. ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.