ಐಪಿಎಲ್ 2027ರ ಸೀಸನ್ಗಾಗಿ ಬಿಸಿಸಿಐ (BCCI) ಅಧಿಕೃತ ಟ್ರೇಡ್ ವಿಂಡೋವನ್ನು ಮುಕ್ತಗೊಳಿಸಿದ್ದು, ಫ್ರಾಂಚೈಸಿಗಳು ಹರಾಜಿಗೂ ಮುನ್ನವೇ ಆಟಗಾರರ ಅದಲು-ಬದಲಿಗೆ ಭರ್ಜರಿ ರಣತಂತ್ರ ರೂಪಿಸುತ್ತಿವೆ. ಮುಂಬರುವ ಮಿನಿ ಹರಾಜಿಗೂ ಮುನ್ನ ತಂಡಗಳ ಸಮತೋಲನವನ್ನು ಸರಿಪಡಿಸಿಕೊಳ್ಳಲು ಈ ವಿಂಡೋ ಅತ್ಯಂತ ನಿರ್ಣಾಯಕವಾಗಿದೆ. ಐಪಿಎಲ್ ಟ್ರೇಡ್ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂಪೂರ್ಣ ನಿಯಮಗಳು ಮತ್ತು ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
ಟ್ರೇಡ್ ವಿಂಡೋ ಎಂದರೇನು?
ಐಪಿಎಲ್ ಟ್ರೇಡ್ ವಿಂಡೋ ಎಂದರೆ ಹರಾಜಿನಲ್ಲಿ ಭಾಗವಹಿಸದೆ, ಫ್ರಾಂಚೈಸಿಗಳು ಪರಸ್ಪರ ಒಪ್ಪಂದದ ಮೂಲಕ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ವಿಶೇಷ ಪ್ರಕ್ರಿಯೆ.
ಸಾಮಾನ್ಯವಾಗಿ ಐಪಿಎಲ್ ಸೀಸನ್ ಮುಗಿದ ಒಂದು ತಿಂಗಳ ನಂತರ ಈ ವಿಂಡೋ ಆರಂಭವಾಗುತ್ತದೆ. ಅಲ್ಲದೆ ಮುಂದಿನ ಸೀಸನ್ನ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಲು ಇನ್ನು 7 ದಿನಗಳು ಬಾಕಿ ಇರುವಾಗ ಈ ವಿಂಡೋ ಅಧಿಕೃತವಾಗಿ ಮುಚ್ಚಲ್ಪಡುತ್ತದೆ.
ಟ್ರೇಡ್ ಮಾಡುವ ವಿಧಾನಗಳು:
ಐಪಿಎಲ್ ಫ್ರಾಂಚೈಸಿಗಳು ಪ್ರಮುಖವಾಗಿ ಎರಡು ಆಯ್ಕೆಗಳ ಮೂಲಕ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಬಹುದು.
- ನೇರ ನಗದು ಒಪ್ಪಂದ: ಖರೀದಿಸುವ ತಂಡವು ಆಟಗಾರನ ಸಂಪೂರ್ಣ ಹರಾಜು ಮೊತ್ತವನ್ನು ನಗದಾಗಿ ನೀಡಿ, ಆತನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು.
- ಆಟಗಾರರ ವಿನಿಮಯ: ಎರಡು ತಂಡಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಇಬ್ಬರು ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಈ ವೇಳೆ ಇಬ್ಬರ ಸಂಭಾವನೆಯಲ್ಲಿ ವ್ಯತ್ಯಾಸವಿದ್ದರೆ, ಆ ಮೊತ್ತವನ್ನು ಹಣದ ರೂಪದಲ್ಲಿ ಸರಿದೂಗಿಸಲು ಅವಕಾಶವಿದೆ.
ಬಿಸಿಸಿಐನ ಕಟ್ಟುನಿಟ್ಟಿನ ನಿಯಮಗಳು:
ಟ್ರೇಡ್ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿರಲು ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
- ಆಟಗಾರನ ಒಪ್ಪಿಗೆ ಕಡ್ಡಾಯ: ಯಾವುದೇ ತಂಡವು ಆಟಗಾರನಿಗೆ ಇಷ್ಟವಿಲ್ಲದೆ ಬಲವಂತವಾಗಿ ಬೇರೆ ತಂಡಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲ. ಆಟಗಾರನು ಅಧಿಕೃತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯ.
- ಹರಾಜು ಪರ್ಸ್ ನಿಯಮ: ಆಟಗಾರನ ಮೂಲ ಹರಾಜು ಬೆಲೆ ಎಷ್ಟಿರುತ್ತದೆಯೋ, ಅಷ್ಟು ಮೊತ್ತ ಮಾತ್ರ ಖರೀದಿಸುವ ತಂಡದ ಹರಾಜು ಪರ್ಸ್ನಿಂದ ಕಡಿತಗೊಳ್ಳುತ್ತದೆ. ಹಾಗೆಯೇ ಮಾರಾಟ ಮಾಡಿದ ತಂಡದ ಪರ್ಸ್ಗೆ ಮರಳಿ ಸೇರುತ್ತದೆ.
- ವರ್ಗಾವಣೆ ಶುಲ್ಕ: ಆಟಗಾರನನ್ನು ಸೆಳೆಯಲು ಫ್ರಾಂಚೈಸಿಗಳು ಮೂಲ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ‘ವರ್ಗಾವಣೆ ಶುಲ್ಕ’ವಾಗಿ ನೀಡಬಹುದು. ಈ ಹೆಚ್ಚುವರಿ ಹಣ ಹರಾಜು ಪರ್ಸ್ಗೆ ಒಳಪಡುವುದಿಲ್ಲ.
- ಫಿಟ್ನೆಸ್ ಮತ್ತು ಅನುಮೋದನೆ: ಟ್ರೇಡ್ ಆಗುವ ಆಟಗಾರನು ವೈದ್ಯಕೀಯವಾಗಿ ಫಿಟ್ ಇರಬೇಕು. ಪ್ರತಿಯೊಂದು ಟ್ರೇಡ್ ಒಪ್ಪಂದಕ್ಕೂ ಐಪಿಎಲ್ ಗವರ್ನಿಂಗ್ ಕೌನ್ಸಿಲ್ನ ಅಂತಿಮ ಅನುಮೋದನೆ ಅತ್ಯಗತ್ಯ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ
ಈ ಬಾರಿ ಯಾರ ಮೇಲೆ ಕಣ್ಣು?
ಪ್ರಸಕ್ತ ಸೀಸನ್ನಲ್ಲಿ ನಾಯಕತ್ವದ ಬದಲಾವಣೆ, ಆಟಗಾರರ ಅಸಮಾಧಾನ ಮತ್ತು ತಂಡದ ಸಂಯೋಜನೆಯ ಕಾರಣಗಳಿಂದಾಗಿ ಕೆಲವು ಹೈ-ಪ್ರೊಫೈಲ್ ಆಟಗಾರರು ಟ್ರೇಡ್ ವಿಂಡೋ ಮೂಲಕ ಬೇರೆ ತಂಡ ಸೇರುವ ಸಾಧ್ಯತೆ ದಟ್ಟವಾಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಟ್ರೇಡ್ ವಿಂಡೋದಲ್ಲಿ ಸಕ್ರಿಯವಾಗಿವೆ ಎಂದು ವರದಿಯಾಗಿದೆ.