2026 ರ ದುಲೀಪ್ ಟ್ರೋಫಿಗಾಗಿ (Duleep Trophy 2026) ಉತ್ತರ ವಲಯ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ, ತಂಡದ ನಾಯಕತ್ವವನ್ನು ಜಮ್ಮು ಮತ್ತು ಕಾಶ್ಮೀರದ ಉದಯೋನ್ಮುಖ ಆಟಗಾರ 24 ವರ್ಷದ ಕನ್ಹಯ್ಯಾ ವಾಧವನ್ (Kanhaiya Wadhawan) ಅವರಿಗೆ ಹಸ್ತಾಂತರಿಸಲಾಗಿದೆ. ಹಾಗೆಯೇ ಆಯುಷ್ ಬಡೋನಿ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಈ ಪ್ರಥಮ ದರ್ಜೆ ಪಂದ್ಯಾವಳಿ ಆಗಸ್ಟ್ 23 ರಂದು ಪ್ರಾರಂಭವಾಗಲಿದ್ದು ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯ, ಉತ್ತರ ವಲಯ, ಈಶಾನ್ಯ ವಲಯ ಮತ್ತು ಕೇಂದ್ರ ವಲಯ ತಂಡಗಳು ಕಣಕ್ಕಿಳಿಯಲಿವೆ.
ವಾಧವನ್ ಜೊತೆಗೆ, ಆರಂಭಿಕ ಕಮ್ರಾನ್ ಇಕ್ಬಾಲ್, ಆಲ್ರೌಂಡರ್ ಅಬ್ದುಲ್ ಸಮದ್, ಎಡಗೈ ಸ್ಪಿನ್ನರ್ ಅಬಿದ್ ಮುಷ್ತಾಕ್, ವೇಗದ ಬೌಲರ್ಗಳಾದ ಸುನಿಲ್ ಕುಮಾರ್ ಮತ್ತು ಯುಧ್ವೀರ್ ಸಿಂಗ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ ಜಮ್ಮು ಮತ್ತು ಕಾಶ್ಮೀರದ ನಾಯಕ ಮತ್ತು 41 ವರ್ಷದ ಅನುಭವಿ ಬ್ಯಾಟ್ಸ್ಮನ್ ಪರಾಸ್ ಡೋಗ್ರಾ ಅವರನ್ನು ತಂಡದಲ್ಲಿ ಸೇರಿಸಲಾಗಿಲ್ಲ.
ಕನ್ಹಯ್ಯಾ ವಾಧ್ವಾನ್ ಯಾರು?
ಕನ್ಹಯ್ಯಾ ವಾಧವನ್ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್. ಅವರು ಜಮ್ಮು ಮತ್ತು ಕಾಶ್ಮೀರ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕಳೆದ ವರ್ಷ, ಶುಭಮನ್ ಗಿಲ್ಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಆದಾಗ್ಯೂ, ಗಾಯದಿಂದಾಗಿ ಅವರು ಆಡಲು ಸಾಧ್ಯವಾಗಲಿಲ್ಲ. ಈ ವರ್ಷ, ದುಲೀಪ್ ಟ್ರೋಫಿಯ ಸಮಯದಲ್ಲಿ ಭಾರತ ತಂಡದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪ್ರವಾಸವನ್ನು ನಿಗದಿಪಡಿಸಲಾಗಿದ್ದು, ಶುಭಮನ್ ಗಿಲ್ ಮತ್ತು ಆಕಿಬ್ ನಬಿಯಂತಹ ಆಟಗಾರರು ಟೂರ್ನಿಗೆ ಲಭ್ಯವಿರುವುದಿಲ್ಲ. ಅದಕ್ಕಾಗಿಯೇ ಈ ಬಾರಿ ಕನ್ಹಯ್ಯಾ ವಾಧವನ್ಗೆ ತಂಡದ ನಾಯಕತ್ವ ವಹಿಸಲಾಗಿದೆ.
ಅರ್ಷದೀಪ್ ಸಿಂಗ್ ಬೌಲಿಂಗ್ ಬಲ
15 ಸದಸ್ಯರ ಉತ್ತರ ವಲಯ ತಂಡದಲ್ಲಿ ದೆಹಲಿ (ಡಿಡಿಸಿಎ), ಜಮ್ಮು ಮತ್ತು ಕಾಶ್ಮೀರ (ಜೆಕೆಸಿಎ) ಮತ್ತು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಆಟಗಾರರು ಇದ್ದಾರೆ. ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡದ ಆರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.
15 ಸದಸ್ಯರ ಉತ್ತರ ವಲಯ ತಂಡ: ಕನ್ಹಯ್ಯಾ ವಾಧವಾನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಾಂಬೋಜ್, ಯುಧ್ವೀರ್ ಸಿಂಗ್ ಮತ್ತು ನಿಖಿಲ್ ಕವಿಶ್ಯಪ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:54 pm, Mon, 3 August 26