ಇಸ್ಲಾಮಾಬಾದ್, ಆಗಸ್ಟ್ 3: ಭಾರತದ ಗಡಿ ಭಾಗದಲ್ಲಿ ಶತ್ರು ರಾಷ್ಟ್ರವಾದ ಪಾಕಿಸ್ತಾನ (Pakistan) ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಚೀನಾದಿಂದ ಖರೀದಿಸಿದ ಅತ್ಯಾಧುನಿಕ SH-15 ವೀಲ್ಡ್ ಸೆಲ್ಫ್-ಪ್ರೊಪೆಲ್ಡ್ ಫಿರಂಗಿಗಳನ್ನು ಭಾರತೀಯ ಗಡಿಯುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ನಿಯೋಜಿಸಿದೆ. ಗಡಿ ನಿಯಂತ್ರಣ ರೇಖೆ (LoC) ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಕೆನಾನ್ ಮತ್ತು ಫಿರಂಗಿ ಪಡೆಯನ್ನು ಬಲಪಡಿಸುವ ಉದ್ದೇಶದಿಂದ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಏನಿದು SH-15 ಫಿರಂಗಿ ಪಡೆ?:
SH-15 ಎಂಬುದು ಚೀನಾದ ನೋರಿಂಕೋ (NORINCO) ಸಂಸ್ಥೆಯು ಅಭಿವೃದ್ಧಿಪಡಿಸಿದ 155mm ವೀಲ್ಡ್ ಹೌವಿಟ್ಜರ್ ಫಿರಂಗಿಯಾಗಿದೆ. ಇದು 6×6 ಟ್ರಕ್ ಆಧಾರಿತ ವ್ಯವಸ್ಥೆಯಾಗಿದ್ದು, ಯಾವುದೇ ರೀತಿಯ ಕಠಿಣ ಹಾಗೂ ಪರ್ವತದ ಭೂಪ್ರದೇಶಗಳಲ್ಲಿ ಕೂಡ ಅತ್ಯಂತ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಫಿರಂಗಿಗಳು ಸಾಮಾನ್ಯ ಗುಂಡುಗಳ ಮೂಲಕ ಸುಮಾರು 30ರಿಂದ 39 ಕಿ.ಮೀ. ಹಾಗೂ ರಾಕೆಟ್ ಅಸಿಸ್ಟೆಡ್ ಗನ್‌ಗಳ ಮೂಲಕ 53 ಕಿ.ಮೀ.ವರೆಗಿನ ದೂರದಲ್ಲಿರುವ ಶತ್ರುಗಳ ನೆಲೆಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದು ಡಿಜಿಟಲ್ ಫೈರ್-ಕಂಟ್ರೋಲ್ ಸಿಸ್ಟಮ್, ರಾಡಾರ್ ಹಾಗೂ ಲೇಸರ್ ರೇಂಜ್ ಫೈಂಡರ್‌ಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ದಾರುಣ ಸಾವು
ಪಾಕಿಸ್ತಾನವು ಚೀನಾದಿಂದ ಒಟ್ಟು 236ಕ್ಕೂ ಹೆಚ್ಚು SH-15 ಫಿರಂಗಿಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಅವುಗಳಲ್ಲಿ ಭಾರಿ ಪ್ರಮಾಣದ ಫಿರಂಗಿಗಳನ್ನು ಭಾರತೀಯ ಗಡಿಗೆ ಹತ್ತಿರವಿರುವ ಪ್ರಮುಖ ಸೇನಾ ವಿಭಾಗಗಳಿಗೆ ಹಸ್ತಾಂತರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಪಂಜಾಬ್ ಗಡಿ ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಸಮೀಪ ಇವುಗಳನ್ನು ನಿಯೋಜಿಸಲಾಗಿದೆ.
ಮೇ 2025ರಲ್ಲಿ ಭಾರತವು ಗಡಿ ನಿಯಂತ್ರಣ ರೇಖೆ (LoC) ಮತ್ತು ಪಾಕಿಸ್ತಾನದ ಒಳಗಿನ ಉಗ್ರರ ನೆಲೆಗಳ ಮೇಲೆ ನಡೆಸಿದ್ದ ‘ಆಪರೇಷನ್ ಸಿಂಧೂರ್’ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನಂತರ, ಪಾಕಿಸ್ತಾನ ತನ್ನ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಮುಂದಾಗಿದೆ.
ಇದನ್ನೂ ಓದಿ: ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಗಡಿಗಳಲ್ಲಿ ಪ್ರಬಲ ರೈಲು ಜಾಲ ಅಳವಡಿಕೆಗೆ ಭಾರತ ಯೋಜನೆ; 45,000 ಕೋಟಿ ರೂ ಹೂಡಿಕೆ ಸಾಧ್ಯತೆ
ಭಾರತೀಯ ಸೇನೆಯ ಸಿದ್ಧತೆ:
ಪಾಕಿಸ್ತಾನದ ಈ ನಡೆಯನ್ನು ಭಾರತೀಯ ರಕ್ಷಣಾ ಪಡೆಗಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿವೆ. ಭಾರತೀಯ ಸೇನೆಯು ಈಗಾಗಲೇ ಗಡಿ ಪ್ರದೇಶಗಳಲ್ಲಿ ತನ್ನದೇ ಆದ ಕೌಂಟರ್-ಆರ್ಟಿಲರಿ ವ್ಯವಸ್ಥೆಯನ್ನು ಸಜ್ಜುಗೊಳಿಸಿದೆ. ಭಾರತವು ತನ್ನ ಗಡಿಯಲ್ಲಿ 155mm ಸ್ವಯಂಚಾಲಿತ ಕೆ-9 ವಜ್ರ ಫಿರಂಗಿಗಳನ್ನು ನಿಯೋಜಿಸಿದೆ. ಅಮೆರಿಕ ನಿರ್ಮಿತ M777 ಫಿರಂಗಿಗಳನ್ನು ಎತ್ತರದ ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ತಕ್ಷಣವೇ ರವಾನಿಸುವ ಸಾಮರ್ಥ್ಯ ಭಾರತಕ್ಕಿದೆ. ಸ್ವದೇಶಿ ನಿರ್ಮಿತ ಧನುಷ್ ಫಿರಂಗಿ ಪಡೆ ಮತ್ತು ‘ಪಿನಾಕಾ’ ರಾಕೆಟ್ ಲಾಂಚರ್ ಸಿಸ್ಟಮ್‌ಗಳು ಭಾರತದ ಗಡಿಯಲ್ಲಿ ಎಲ್ಲ ರೀತಿಯ ಸವಾಲನ್ನು ಎದುರಿಸಲು ಸಂಪೂರ್ಣ ಸಜ್ಜಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ