ಕಲಬುರಗಿ ಆ. 4: ಖಾಲಿ ನಿವೇಶನದ ಆಸ್ತಿ ವರ್ಗಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದಾಗ ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೇದಾಂಗ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಬಿದ್ದಿದ್ದಾರೆ. ಕಿಶನ್ ಪವಾರ್ ಅವರ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಅವರ ಮರಣದ ನಂತರ ಕುಟುಂಬದವರ ಹೆಸರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಲಾಗಿತ್ತು. ಮರಣ ಪ್ರಮಾಣಪತ್ರ ಹಾಗೂ ಅಗ್ರಿಕಲ್ಚರಲ್/ಸ್ಟಾಂಪ್ ಪತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ, ಕಾರ್ಯದರ್ಶಿ ವೇದಾಂಗ್ ಅವರು ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಸಂಜೀವ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಚರಣೆ ರೂಪಿಸಿದ್ದರು. ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೂರುದಾರರಿಂದ 9,950 ರೂ. ಲಂಚ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅಧಿಕಾರಿಯನ್ನು ಕೈಯಾರೆ ಬಂಧಿಸಿದ್ದಾರೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ರವಿ ಪವಾರ್ ಅವರ ನೇತೃತ್ವದ ತಂಡ ಈ ಯಶಸ್ವಿ ದಾಳಿ ನಡೆಸಿದ್ದು, ಆರೋಪಿ ವೇದಾಂಗ್ ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ