ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಸಿನಿಮಾ ತೆರೆಗೆ ಬರದ ಕಾರಣ, ಶಾರುಖ್ ಅವರ ಮುಂಬರುವ ‘ಕಿಂಗ್’ (King) ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಬಿಡುಗಡೆ 2027ಕ್ಕೆ ಮುಂದೂಡಲ್ಪಡಬಹುದು ಎಂಬ ವದಂತಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ, ಈ ವದಂತಿಗಳಿಗೆ ತೆರೆಬಿದ್ದಿದ್ದು, ಮೊದಲಿನ ಪ್ಲ್ಯಾನ್ನಂತೆಯೇ 2026ರ ಡಿಸೆಂಬರ್ 24ರಂದು ‘ಕಿಂಗ್’ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಹಾಲಿವುಡ್ನ ದೈತ್ಯ ಸಿನಿಮಾಗಳೊಂದಿಗೆ ಬಿಗ್ ಕ್ಲ್ಯಾಶ್
ಈ ವರ್ಷದ ಡಿಸೆಂಬರ್ ತಿಂಗಳು ಚಿತ್ರರಂಗದಲ್ಲಿ ಅತಿ ದೊಡ್ಡ ಬಾಕ್ಸ್ ಆಫೀಸ್ ಕದನಕ್ಕೆ ಸಾಕ್ಷಿಯಾಗಲಿದೆ. ಶಾರುಖ್ ಅವರ ‘ಕಿಂಗ್’ ಬಿಡುಗಡೆಯಾಗುವ ಒಂದೇ ವಾರದ ಅಂತರದಲ್ಲಿ ಹಾಲಿವುಡ್ನ ಮೂರು ಪ್ರಮುಖ ಬಿಗ್ ಬಜೆಟ್ ಸಿನಿಮಾಗಳು ತೆರೆಕಾಣುತ್ತಿವೆ. ಡಿಸೆಂಬರ್ 18ರಂದು ತೆರೆಕಾಣಲಿರುವ ‘ಅವೆಂಜರ್ಸ್: ಡೂಮ್ಸ್ಡೇ’ ಸಿನಿಮಾ ಭಾರತದಲ್ಲಿ ಬೃಹತ್ ಮಟ್ಟದ ಗಳಿಕೆ ಮಾಡುವ ನಿರೀಕ್ಷೆಯಿದೆ.
ಡಿಸೆಂಬರ್ 18ರಂದೇ ಬಿಡುಗಡೆಯಾಗಲಿರುವ ‘ಡ್ಯೂನ್: ಪಾರ್ಟ್ 3’ ಸಿನಿಮಾ ಐಮ್ಯಾಕ್ಸ್ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ. ಅಲ್ಲದೇ, ಇದೇ ಸಮಯದಲ್ಲಿ ಬಿಡುಗಡೆ ಆಗಲಿರುವ ‘ಜುಮಾಂಜಿ: ಓಪನ್ ವರ್ಲ್ಡ್’ ಸಿನಿಮಾ ಕೂಡ ಭಾರತದಲ್ಲಿ ಅಪಾರ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಈ ಸಿನಿಮಾದಲ್ಲಿ ಡ್ವೇನ್ ಜಾನ್ಸನ್ ಅವರು ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳ ಜೊತೆಯಲ್ಲಿ ‘ಕಿಂಗ್’ ಪೈಪೋಟಿ ನೀಡಲಿದೆ.
‘ಕಿಂಗ್’ ಸಿನಿಮಾಗೆ ಸವಾಲು ಮತ್ತು ನಿರೀಕ್ಷೆ:
ಭಾರತೀಯ ಮಾರುಕಟ್ಟೆಯಲ್ಲಿ ಶಾರುಖ್ ಖಾನ್ ಅವರ ‘ಕಿಂಗ್’ ಚಿತ್ರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಈ ಚಿತ್ರಕ್ಕೆ ಮೊದಲ ಆದ್ಯತೆ ಸಿಗಲಿದೆ ಎಂದು ಚಿತ್ರರಂಗದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ವಿದೇಶಿ ಮಾರುಕಟ್ಟೆಯಲ್ಲಿ ಹಾಲಿವುಡ್ ಸಿನಿಮಾಗಳು ಪೈಪೋಟಿ ನೀಡಲಿರುವುದರಿಂದ ‘ಕಿಂಗ್’ ಚಿತ್ರಕ್ಕೆ ಚಿತ್ರಮಂದಿರಗಳು ಮತ್ತು ಸ್ಕ್ರೀನ್ಗಳ ಸಂಖ್ಯೆಯಲ್ಲಿ ತುಸು ಸವಾಲು ಎದುರಾಗಬಹುದು.
ಇದನ್ನೂ ಓದಿ: ಶಾರುಖ್ ಖಾನ್ಗೆ ಪೆಟ್ಟಾಗಿದ್ದು ಸುಳ್ಳಾ? ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ಹೋಗಿದ್ದು ಯಾಕೆ?
ಆದಾಗ್ಯೂ, ಶಾರುಖ್ ಖಾನ್ ಅವರಿಗೆ ವಿದೇಶಗಳಲ್ಲೂ ದೊಡ್ಡ ಅಭಿಮಾನಿ ಬಳಗವಿದ್ದು, ‘ಕಿಂಗ್’ ಚಿತ್ರವನ್ನು ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ಜಾಗತಿಕವಾಗಿ ವಿತರಣೆ ಮಾಡುತ್ತಿದೆ. ಸಂಸ್ಥೆಯ ದೀರ್ಘಕಾಲದ ಅನುಭವ ಮತ್ತು ಜಾಗತಿಕ ನೆಟ್ವರ್ಕ್ನಿಂದಾಗಿ ಈ ಚಿತ್ರಕ್ಕೆ ಗರಿಷ್ಠ ಸಂಖ್ಯೆಯ ಸ್ಕ್ರೀನ್ಗಳು ದೊರೆಯಲಿವೆ ಎಂದು ವಿಶ್ಲೇಷಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.