ಉನ್ನತ ಶಿಕ್ಷಣ ಹಾಗೂ ಸ್ನಾತಕೋತ್ತರ (PG) ಅಧ್ಯಯನವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಸಿಹಿ ಸುದ್ದಿ ನೀಡಿದೆ. ರಾಷ್ಟ್ರೀಯ ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿವೇತನ (NSPG) ಯೋಜನೆಯಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಯುಜಿಸಿ ಸಿದ್ಧತೆಗಳನ್ನು ಆರಂಭಿಸಿದೆ. ಈ ಯೋಜನೆಯಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ವಾರ್ಷಿಕ 1.5 ಲಕ್ಷ ರೂ. ವಿದ್ಯಾರ್ಥಿವೇತನ ಲಭ್ಯವಾಗಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಶೀಘ್ರದಲ್ಲೇ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ನಲ್ಲಿ ಪ್ರಾರಂಭವಾಗಲಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಪ್ರಮುಖ ನಿಯಮಗಳು:
ಈ ಯೋಜನೆಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಪೂರ್ಣಾವಧಿಯ (Full-time) ಸ್ನಾತಕೋತ್ತರ ಕೋರ್ಸ್ನ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅರ್ಜಿದಾರರ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬೇಕಾದುದು ಕಡ್ಡಾಯ. ಅರ್ಜಿ ಪ್ರಕ್ರಿಯೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ತಪ್ಪುಗಳಿಲ್ಲದೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಈಗಿನಿಂದಲೇ ಸಿದ್ಧಪಡಿಸಿಕೊಳ್ಳುವಂತೆ ಯುಜಿಸಿ ಸೂಚಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶನ:
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಾಗವಾಗಿ ನಡೆಯಲು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಯುಜಿಸಿ ಪ್ರಮುಖ ನಿರ್ದೇಶನ ನೀಡಿದೆ. ಸಂಸ್ಥೆಗಳ ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿದ 15 ದಿನಗಳ ಒಳಗೆ ಅವುಗಳನ್ನು ಪರಿಶೀಲಿಸಿ ಅನುಮೋದಿಸಬೇಕು ಅಥವಾ ಸೂಕ್ತ ಕಾರಣ ನೀಡಿ ತಿರಸ್ಕರಿಸಬೇಕು. ಇದರಿಂದಾಗಿ ಅರ್ಜಿ ಸಲ್ಲಿಕೆ ಪೋರ್ಟಲ್ ಮುಚ್ಚುವ ಮುನ್ನ ವಿದ್ಯಾರ್ಥಿಗಳಿಗೆ ತಮ್ಮ ಅರ್ಜಿಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ.
ಇದನ್ನೂ ಓದಿ: ಜಾಬ್ ಇಂಟರ್ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್ ಟಿಪ್ಸ್ ಇಲ್ಲಿದೆ
ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಅಪೂರ್ಣ ಅಥವಾ ತಪ್ಪಾದ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದರಿಂದ ವಿದ್ಯಾರ್ಥಿಗಳು ಎಚ್ಚರವಹಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು, ಬ್ಯಾಂಕ್ ಖಾತೆ ವಿವರಗಳು ಹಾಗೂ ಆದಾಯ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ ಅರ್ಜಿಗಾಗಿ ಅಧಿಕೃತ ಪೋರ್ಟಲ್ scholarships.gov.in ಅನ್ನು ನಿಯಮಿತವಾಗಿ ಪರಿಶೀಲಿಸಲು ಸಲಹೆ ನೀಡಲಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ