ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕನ್ನಡದ ನಟಿ ಶ್ರೀಲೀಲಾ (Sreeleela) ಸದ್ಯ ಬಾಕ್ಸ್ ಆಫೀಸ್ನಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ ನಿರೀಕ್ಷಿತ ಗೆಲುವು ಸಿಗದೆ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಈಗೊಂದು ಸಿಹಿ ಸುದ್ದಿ ಸಿಕ್ಕಿದೆ. ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಾಲಿವುಡ್ ಅಂಗಳದಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ರಜನಿಕಾಂತ್ ಅವರ 173ನೇ ಸಿನಿಮಾವಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಧರ್ಮನ್’ ಎಂದು ಹೆಸರಿಡಲಾಗಿದ್ದು, ಅಶ್ವತ್ ಮಾರಿಮುತ್ತು ನಿರ್ದೇಶನ ಮಾಡುತ್ತಿದ್ದಾರೆ. ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದೆ. ಈ ಪ್ರತಿಷ್ಠಿತ ಪ್ರಾಜೆಕ್ಟ್ನಲ್ಲಿ ಶ್ರೀಲೀಲಾ ಭಾಗವಾದರೆ, ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಲಿದೆ.
ಗೆಲುವಿನ ನಿರೀಕ್ಷೆಯಲ್ಲಿ ಶ್ರೀಲೀಲಾ:
ಇತ್ತೀಚೆಗೆ ತಮಿಳಿನಲ್ಲಿ ‘ಪರಾಶಕ್ತಿ’ ಹಾಗೂ ತೆಲುಗಿನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲು ವಿಫಲವಾದವು. ಸದ್ಯ ತೆಲುಗು ಚಿತ್ರರಂಗದಲ್ಲಿಯೂ ಯಶಸ್ಸಿಗಾಗಿ ಕಾಯುತ್ತಿರುವ ಶ್ರೀಲೀಲಾಗೆ, ರಜನಿಕಾಂತ್ ಅವರ ಸಿನಿಮಾದ ಅವಕಾಶ ಹೊಸ ಆಶಾಕಿರಣ ಮೂಡಿಸಿದೆ.
Actress #Sreeleela has been confirmed as the female lead in #Rajinikanth‘s next film. pic.twitter.com/PwqGLBKwKv
— Milagro Movies (@MilagroMovies) August 6, 2026
ಬಾಲಿವುಡ್ಗೆ ಶ್ರೀಲೀಲಾ ಎಂಟ್ರಿ:
ಶೀಘ್ರದಲ್ಲೇ ಬಾಲಿವುಡ್ಗೂ ಪಾದಾರ್ಪಣೆ ಮಾಡಲು ಶ್ರೀಲೀಲಾ ಸಜ್ಜಾಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಅವರು ನಟಿಸಿದ ಸಿನಿಮಾ ಈಗ ನಿರ್ಮಾಣ ಹಂತದಲ್ಲಿದೆ. ರಜನಿಕಾಂತ್ ಅಭಿನಯದ ಬಿಗ್ ಪ್ರಾಜೆಕ್ಟ್ ಯಶಸ್ವಿಯಾದರೆ ಹಿಂದಿ ಚಿತ್ರರಂಗದಲ್ಲೂ ಶ್ರೀಲೀಲಾ ಅವರಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸಹಾಯವಾಗಲಿದೆ. ಈ ಕುರಿತು ‘ಧರ್ಮನ್’ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವುದು ಒಂದೇ ಬಾಕಿಯಿದೆ.
ಇದನ್ನೂ ಓದಿ: ತಮನ್ನಾ, ಸಮಂತಾ, ಶ್ರೀಲೀಲಾ ಬಳಿಕ ಈಗ ಕಿರ್ತಿ ಸುರೇಶ್
ಶ್ರೀಲೀಲಾ, ರಜನಿಕಾಂತ್ ವಯಸ್ಸು:
ಅಂದಹಾಗೆ, ಈ ಸುದ್ದಿ ಇನ್ನೂ ಖಚಿತ ಆಗಿಲ್ಲ. ಹಾಗಿದ್ದರೂ ಕೂಡ ರಜನಿಕಾಂತ್ ಮತ್ತು ಶ್ರೀಲೀಲಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಶ್ರೀಲೀಲಾ ಅವರಿಗೆ ಈಗ 25 ವರ್ಷ ವಯಸ್ಸು. ರಜನಿಕಾಂತ್ ಅವರಿಗೆ 75 ವರ್ಷ ವಯಸ್ಸು. ಹಾಗಾಗಿ ಈ ಸಿನಿಮಾದಲ್ಲಿ ಅವರಿಬ್ಬರ ಪಾತ್ರ ಹೇಗಿರಲಿದೆ ಎಂಬ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.