ನವದೆಹಲಿ, ಆಗಸ್ಟ್ 7: ಬಿಎಸ್ಸೆನ್ನೆಲ್ (BSNL- ಭಾರತೀಯ ಸಂಚಾರ ನಿಗಮ ನಿಯಮಿತ) ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿದ 25,000 ವೈ-ಫೈ ಹಾಟ್ಸ್ಪಾಟ್ಗಳ ಯೋಜನೆಯಲ್ಲಿ ತೀವ್ರ ಆರ್ಥಿಕ ನಷ್ಟ ಮತ್ತು ಯೋಜನಾ ಲೋಪಗಳು ಕಂಡುಬಂದಿವೆ ಎಂದು ಸಂಸದೀಯ ಸಮಿತಿಯು ಲೋಕಸಭೆಯಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ನೂರಾರು ಕೋಟಿ ರೂ ವೆಚ್ಚ ಮಾಡಿ ಜಾರಿಗೊಳಿಸಿದ ಈ ಯೋಜನೆ ಬಹುತೇಕ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ವರ್ಷಕ್ಕೆ ₹75 ಕೋಟಿ ಆದಾಯ ಬರುವ ಗುರಿ ಇಟ್ಟಿದ್ದರೂ, ಸಿಕ್ಕಿದ್ದು ಕೇವಲ ₹3 ಲಕ್ಷ ಮಾತ್ರವೇ ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ವಾಸ್ತವ ಸಂಗತಿ ತೆರೆದಿಡಲಾಗಿದೆ.
ವರದಿ ಪ್ರಕಾರ, 2018-19ರ ಸಾಲಿನಲ್ಲಿ ವರ್ಷಕ್ಕೆ ₹75 ಕೋಟಿ ಆದಾಯ ಗಳಿಸುವ ಗುರಿ ಹೊಂದಲಾಗಿತ್ತು. ಆದರೆ, 2017-18 ರಿಂದ 2021-22ರ ನಡುವೆ ಬಿಎಸ್ಎನ್ಎಲ್ ಗಳಿಸಿದ್ದು ಕೇವಲ ₹3.09 ಲಕ್ಷ ಮಾತ್ರ. ಬಿಎಸ್ಸೆನ್ನೆಲ್ ₹6,000 ಕೋಟಿ ವೆಚ್ಚದಲ್ಲಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಲಕ್ಷದಷ್ಟು ವೈಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸುವ ಬೃಹತ್ ಯೋಜನೆಯ ಭಾಗ ಇದು.
ಇದನ್ನೂ ಓದಿ: ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ?
₹1.15 ಕೋಟಿ ಸಬ್ಸಿಡಿ ನಷ್ಟ
ಯುಎಸ್ಒಎಫ್ (USOF) ಬೆಂಬಲಿತ ಯೋಜನೆಯಡಿ ಸ್ಥಾಪಿಸಲಾದ 24,333 ಹಾಟ್ಸ್ಪಾಟ್ಗಳಲ್ಲಿ 700 ಹಾಟ್ಸ್ಪಾಟ್ಗಳು ಸಬ್ಸಿಡಿ ಅವಧಿ ಮುಗಿದ ನಂತರ ಚಾಲನೆಗೆ ಬಂದವು ಮತ್ತು 8 ಹಾಟ್ಸ್ಪಾಟ್ಗಳನ್ನು ಎಂದಿಗೂ ಪ್ರಾರಂಭಿಸಲೇ ಇಲ್ಲ. ಇದರಿಂದಾಗಿ ಸಂಸ್ಥೆಗೆ ₹1.15 ಕೋಟಿ ಕಾರ್ಯಚರಣಾ (OPEX) ಸಬ್ಸಿಡಿ ನಷ್ಟವಾಯಿತು.
ವೈಫಲ್ಯಕ್ಕೆ ಪ್ರಮುಖ ಕಾರಣಗಳು
- ಉಚಿತ ವೈ-ಫೈ ಸೇವೆಯನ್ನು ನಿಗದಿಗಿಂತ ಹೆಚ್ಚಿನ ಅವಧಿಗೆ ಮುಂದುವರಿಸಿದ್ದು.
- ಸರಿಯಾದ ಮಾರುಕಟ್ಟೆ ಸಮೀಕ್ಷೆ ನಡೆಸದಿರುವುದು.
- ಉಚಿತ ಬಳಕೆದಾರರನ್ನು ಪಾವತಿಸುವ ಗ್ರಾಹಕರನ್ನಾಗಿ (paying subscribers) ಪರಿವರ್ತಿಸುವಲ್ಲಿ ವಿಫಲವಾಗಿದ್ದು.
ಇದನ್ನೂ ಓದಿ: ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ
ಸಂಸದೀಯ ಸಮಿತಿಯ ಶಿಫಾರಸುಗಳು
ಬಿಜೆಪಿ ಸಂಸದ ಬೈಜಯಂತ್ ಜೈ ಪಾಂಡಾ ಅವರ ನೇತೃತ್ವದ ಸಾರ್ವಜನಿಕ ಉದ್ದಿಮೆಗಳ ಸಮಿತಿಯು (CoPU), ಭವಿಷ್ಯದಲ್ಲಿ ಸಾರ್ವಜನಿಕ ಹಣದಿಂದ ಕೈಗೊಳ್ಳುವ ಟೆಲಿಕಾಂ ಯೋಜನೆಗಳಲ್ಲಿ ಹೊಣೆಗಾರಿಕೆ ನಿಗದಿಪಡಿಸಲು, ನಷ್ಟಕ್ಕೆ ಕಾರಣರಾದವರ ವಿರುದ್ಧ ಆಂತರಿಕ ಪರಿಶೀಲನೆ ನಡೆಸಲು ಮತ್ತು ಕಾಲಮಿತಿಯ ಹೊಣೆಗಾರಿಕೆ ಚೌಕಟ್ಟನ್ನು (accountability framework) ರೂಪಿಸಲು ಸೂಚಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ