ಪ್ರಿಯಾಂಕಾ ಚೋಪ್ರಾ (Priyanka Chopra), ಬಾಲಿವುಡ್ ತೊರೆದು ಹಾಲಿವುಡ್ಗೆ ಹಾರಿ ವರ್ಷಗಳೇ ಆಗಿವೆ. ಹಾಲಿವುಡ್ಗೆ ಹಾರಿದ ಆರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಸಣ್ಣ-ಪುಟ್ಟ ಪಾತ್ರಗಳೇ ದೊರೆತಿದ್ದು, ಟಿವಿ ಸರಣಿಯೊಂದರಲ್ಲಿ ನಟಿಸಿದರು. ವಿಲನ್ ಆಗಿ ನಟಿಸಿದರು. ಬಳಿಕ ಪೋಷಕ ಪಾತ್ರ ಹೀಗೆ ಸಾಗಿ ಕಳೆದ ಕೆಲ ವರ್ಷಗಳಲ್ಲಿ ಪ್ರಧಾನ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾಲಿವುಡ್ನ ಸ್ಟಾರ್ ನಟನ ಎದುರು ಸರಿಸಮನಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ಪ್ರಿಯಾಂಕಾ, ಹಾಲಿವುಡ್‌ನಲ್ಲಿ ಮತ್ತೊಂದು ದೊಡ್ಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ನಟ ರಸೆಲ್ ಕ್ರೋಗೆ ಜೋಡಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ‘ಬ್ಲೂಫ್ಲೈ’ ಎಂದು ಹೆಸರಿಡಲಾಗಿದ್ದು, ಇದೊಂದು ಆಕ್ಷನ್ ಭರಿತ ಸೈನ್ಸ್ ಫಿಕ್ಷನ್ ಕತೆಯನ್ನು ಒಳಗೊಂಡಿದೆ. ಭಾರಿ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಸಿನಿಮಾದ ಕತೆಯೂ ಬಲು ವಿಭಿನ್ನವಾಗಿದೆ.
ಈ ಚಿತ್ರವು ಕಾಂಗೋದಲ್ಲಿ ರಹಸ್ಯ ಬ್ಲಾಕ್-ಆಪ್ಸ್ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಶ್ವಸಂಸ್ಥೆಯ ಭಾಷಾಂತರಕಾರನ ಕಥೆಯನ್ನು ಹೊಂದಿದೆ. ಅಸ್ತಿತ್ವದಲ್ಲಿರದ ನಿಗೂಢ ವಿಮಾನದ ಒಳಗುಟ್ಟುಗಳನ್ನು ಹುಡುಕುವ ಕೆಲಸ ನಾಯಕ ಮತ್ತು ಆತನ ತಂಡದ್ದು. ತಂಡವು ಅಪಾಯಕಾರಿ ಮಿಲಿಟರಿ ನಿಯಂತ್ರಿತ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಂತೆ, ಅವರು ನಿಧಾನವಾಗಿ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸುತ್ತಾರೆ, ಜೊತೆಗೆ ಜೀವನ್ಮರಣ ಹೋರಾಟದ ಆಪರೇಷನ್ ಒಂದರಲ್ಲಿ ತೊಡಗಿಕೊಳ್ಳುತ್ತಾರೆ.
ಇದನ್ನೂ ಓದಿ:‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ
ಚಿತ್ರಕಥೆಯನ್ನು ಡೇವಿಡ್ ಫ್ರಿಜೆರಿಯೊ, ವಿಲಿಯಂ ಯುಬ್ಯಾಂಕ್ ಮತ್ತು ಕಾರ್ಲೈಲ್ ಯುಬ್ಯಾಂಕ್ ಬರೆದಿದ್ದಾರೆ. ಸಿನಿಮಾವನ್ನು ನಿಮ್ರೋಡ್ ಆಂಟಲ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ‘ಪ್ರೆಡೆಟರ್’, ‘ಆಫ್ಟರ್ಬರ್ತ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಸ್ಟ್ರೇಂಜರ್ ಥಿಂಗ್ಸ್’ ನ ಕೆಲ ಎಪಿಸೋಡ್ಗಳನ್ನು ಸಹ ನಿರ್ದೇಶಿಸಿದ್ದಾರೆ.
ಇನ್ನು ಸಿನಿಮಾದ ನಾಯಕ, ರಸಲ್ ಕ್ರೋವ್, ಹಾಲಿವುಡ್ನ ಸ್ಟಾರ್ ನಟರಾಗಿದ್ದು, ‘ಗ್ಲಾಡಿಯೇಟರ್’, ‘ಎಲ್ಎ ಕಾನ್ಫಿಡೆನ್ಷಿಯಲ್’, ‘ಎ ಬ್ಯೂಟಿಫುಲ್ ಮೈಂಡ್’, ‘ಬಾಡಿ ಆಫ್ ಲೈಸ್’, ‘ಅಮೆರಿಕನ್ ಗ್ಯಾಂಗ್ಸ್ಟರ್’, ‘ರಾಬಿನ್ ಹುಡ್’, ‘ಸೂಪರ್ ಮ್ಯಾನ್’, ‘ದಿ ಮಮ್ಮಿ’, ‘ವಾರ್ ಮಷಿನ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್, ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ಆಸ್ಕರ್ಗೆ ನಾಮಿನೇಟ್ ಆಗಿದ್ದ ರಸಲ್ ಕ್ರೋವ್, ಒಂದು ಬಾರಿ ಆಸ್ಕರ್ ಗೆದ್ದಿದ್ದಾರೆ ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ