Headlines

ಜ್ಞಾನಭಾರತಿ ವಿವಿ ಆವರಣದಲ್ಲಿ ಹೆಚ್ಚಿದ ಅಪಘಾತ; ಗಾಂಧಿಭವನ ರಸ್ತೆ ಶೀಘ್ರ ಬಂದ್? – Kannada News | Bengaluru University Campus Accidents Rise: Gandhi Bhavan Road Likely to Be Closed

ವಿವಿ ಕುಲಪತಿ ಸಿ. ಶಿವರಾಜು ನೇತೃತ್ವದಲ್ಲಿ ಸಭೆImage Credit source: tv9

ಬೆಂಗಳೂರು, ಆಗಸ್ಟ್ 8: ಬೆಂಗಳೂರು (Bengaluru) ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತು ಚರ್ಚೆ ನಡೆದಿದೆ. ಇತ್ತೀಚೆಗೆ ವಿವಿ ವಿದ್ಯಾರ್ಥಿನಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ಹೆಚ್ಚಾಗಿದೆ. ಜ್ಞಾನಭಾರತಿ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಿಂತ ಸಾರ್ವಜನಿಕರ ಓಡಾಟವೇ ಹೆಚ್ಚಾಗಿದ್ದು, ವಾಹನಗಳ ಸಂಚಾರವೂ ಮಿತಿಮೀರಿದೆ ಎನ್ನಲಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿ ಕುಲಪತಿ ಸಿ. ಶಿವರಾಜು ನೇತೃತ್ವದಲ್ಲಿ ಸಭೆ ನಡೆಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗಿದೆ.

ಕ್ಯಾಂಪಸ್‌ನಲ್ಲಿ ವಾಹನಗಳ ವೇಗಕ್ಕೆ ಇನ್ನಷ್ಟು ಮಿತಿ

ಕ್ಯಾಂಪಸ್‌ನಲ್ಲಿ ವಾಹನಗಳ ವೇಗವನ್ನು ಗಂಟೆಗೆ 20 ಕಿಲೋಮೀಟರ್‌ಗೆ ಮಿತಿಗೊಳಿಸುವುದು, ಟ್ರಾಫಿಕ್ ಪೊಲೀಸರ ನಿಯೋಜನೆ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ವಿವಿ ಕುಲಸಚಿವೆ ಕೆ.ಟಿ. ಶಾಂತಲಾ, ಉಪ ಪೊಲೀಸ್ ಆಯುಕ್ತೆ ಅನಿತಾ ಹದ್ದಣ್ಣನವರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಗಾಂಧಿಭವನ ರಸ್ತೆ ಶೀಘ್ರ ಬಂದ್?

ನಾಗರಬಾವಿಗೆ ಸಂಪರ್ಕ ಕಲ್ಪಿಸುವ ಗಾಂಧಿಭವನ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ, ಈ ರಸ್ತೆಯನ್ನು ಶೀಘ್ರವೇ ಬಂದ್ ಮಾಡುವುದಾಗಿ ಕುಲಪತಿ ಸಿ. ಶಿವರಾಜು ಭರವಸೆ ನೀಡಿದ್ದಾರೆ. ಅಪಘಾತ ನಿಯಂತ್ರಣ ಹಾಗೂ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಭರ್ಜರಿ ಕಾರ್ಯಾಚರಣೆ, 40 ಮಂದಿ ವಶಕ್ಕೆ

ಇನ್ನು ಜ್ಞಾನಭಾರತಿ ಆವರಣದಲ್ಲಿ ಶೈಕ್ಷಣಿಕ ವಾತಾವರಣವೇ ಕ್ಷೀಣಿಸುತ್ತಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕ್ಯಾಂಪಸ್‌ನಲ್ಲಿ ಫ್ಲೈಓವರ್ ನಿರ್ಮಾಣದ ಪ್ರಸ್ತಾವನೆಯೂ ಇದ್ದು, ಸಂಚಾರ ದಟ್ಟಣೆ ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *