ಟಿ20 ಕ್ರಿಕೆಟ್ನ ನ್ಯೂ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಸುತ್ತ ಕೇಳಿಬರುತ್ತಿರುವ ವಿವಾದಗಳಿಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಖಡಕ್ ಉತ್ತರ ನೀಡಿದ್ದಾರೆ. “ಅವನಿಗೆ 15 ವರ್ಷ ಇರಲಿ ಅಥವಾ 18 ವರ್ಷ ಇರಲಿ, ಅದರಿಂದ ಯಾರಿಗೂ ಯಾವುದೇ ನಷ್ಟವಿಲ್ಲ. ಆ ಹುಡುಗನಲ್ಲಿ ಅದ್ಭುತ ಕ್ರಿಕೆಟ್ ಕೌಶಲ್ಯವಿದೆ” ಎಂದು ಬ್ರೆಟ್ ಲೀ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬ್ರೆಟ್ ಲೀ, ವೈಭವ್ ಸೂರ್ಯವಂಶಿಯ ಆಟದ ಶೈಲಿ ಮತ್ತು ಅವರ ಮೇಲಿರುವ ಒತ್ತಡದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬ್ರೆಟ್ ಲೀ ಪ್ರಕಾರ, ಸದ್ಯ ಜಾಗತಿಕ ಕ್ರಿಕೆಟ್ ವಲಯದಲ್ಲಿ ವೈಭವ್ ಸೂರ್ಯವಂಶಿ ಅವರ ವಯಸ್ಸಿನದ್ದೇ ದೊಡ್ಡ ಚರ್ಚೆಯಾಗಿದೆ. ಭಾರತದ ಹೊರಗೆ ಪ್ರತಿಯೊಬ್ಬರೂ ವೈಭವ್ ನಿಜವಾಗಿಯೂ 15 ವರ್ಷದವನೇ ಎಂದು ಆಶ್ಚರ್ಯದಿಂದ ಕೇಳುತ್ತಿದ್ದಾರೆ.
ಆದರೆ ನನಗೆ ಆತನ ವಯಸ್ಸಿನ ಬಗ್ಗೆ ಯಾವುದೇ ತಲೆನೋವಿಲ್ಲ. ಆತ 15 ವರ್ಷದವನಾಗಿದ್ದರೆ ಅದು ಅದ್ಭುತ. ಒಂದು ವೇಳೆ ಆತನಿಗೆ 17 ಅಥವಾ 18 ವರ್ಷವಾಗಿದ್ದರೂ ಯಾರಿಗೆ ತಾನೇ ಏನು ನಷ್ಟ? ಆತ ಅಷ್ಟು ಚಿಕ್ಕ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂಬುದೇ ಮುಖ್ಯ ಎಂದು ಲೀ ಹೇಳಿದ್ದಾರೆ.
ನಿರ್ಭೀತ ದಾಂಡಿಗ!
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಸೂರ್ಯವಂಶಿ ಆಡಿದ ಬಿರುಸಿನ ಇನಿಂಗ್ಸ್ ಅನ್ನು ಬ್ರೆಟ್ ಲೀ ವಿಶೇಷವಾಗಿ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಘಾತಕ ವೇಗಿಗಳ ವಿರುದ್ಧ ಹುಕ್ ಶಾಟ್ ಬಾರಿಸಿದ್ದು ನೋಡಿ ನಿಜಕ್ಕೂ ಫಿದಾ ಆದೆ. ವೈಭವ್ ಸೂರ್ಯವಂಶಿ ಕೇವಲ ಹಿಟ್ಟರ್ ಅಲ್ಲ, ಆತ ಒಬ್ಬ ‘ಟೆಕ್ನಿಕಲ್ ಜೀನಿಯಸ್’. ಹೀಗಾಗಿಯೇ ಆತ ನಿರ್ಭೀತಿಯಿಂದ ಬ್ಯಾಟ್ ಬೀಸುತ್ತಿದ್ದಾನೆ ಎಂದು ಬ್ರೆಟ್ ಲೀ ಕೊಂಡಾಡಿದ್ದಾರೆ.
ಮಾನಸಿಕ ಒತ್ತಡದ ಎಚ್ಚರಿಕೆ:
ವೈಭವ್‌ಗೆ ಇರುವ ನಿಜವಾದ ಪರೀಕ್ಷೆ ಅವರ ಬ್ಯಾಟಿಂಗ್ ಫಾರ್ಮ್ ಅಲ್ಲ, ಬದಲಿಗೆ ಅವರ ಮನಸ್ಥಿತಿ . ಭಾರತದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ಸಿಗುವ ಸ್ಟಾರ್‌ಡಮ್ ಅನ್ನು ನಿಭಾಯಿಸುವುದು ಸುಲಭವಲ್ಲ. ಆದ್ದರಿಂದ ಮಾಧ್ಯಮಗಳು ಮತ್ತು ಅಭಿಮಾನಿಗಳು ಆತನ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಆತನನ್ನು ಒಬ್ಬ ಮಗುವಿನಂತೆ ಮುಕ್ತವಾಗಿ ಆಡಲು ಬಿಡಬೇಕು ಎಂದು ಲೀ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯ: ಅಗರ್ಕರ್, ಬಿಸಿಸಿಐಗೆ ರಹಾನೆ ಖಡಕ್ ಸಂದೇಶ!
ಒಟ್ಟಾರೆಯಾಗಿ, ವಯಸ್ಸಿನ ವಿವಾದಗಳು ಏನೇ ಇದ್ದರೂ, ವೈಭವ್ ಸೂರ್ಯವಂಶಿ ಅವರ ಬ್ಯಾಟ್ ಮಾತ್ರ ಮೈದಾನದಲ್ಲಿ ರನ್ ಮಳೆ ಹರಿಸುತ್ತಲೇ ಇದೆ. ಬ್ರೆಟ್ ಲೀ ಅವರಂತಹ ದಿಗ್ಗಜರ ಬೆಂಬಲ ಈ ಯುವ ಆಟಗಾರನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
Published On – 1:51 pm, Sun, 9 August 26