ನೆಲಮಂಗಲ, ಆಗಸ್ಟ್ 09: ಮನೆಯವರೆಲ್ಲ ಕೆಲಸದ ನಿಮಿತ್ತ ಹೊರಹೋಗಿದ್ದ ಕೇವಲ ಒಂದೇ ಗಂಟೆಯ ಅವಧಿಯಲ್ಲಿ ಖತರ್ನಾಕ್ ಕಳ್ಳನೊಬ್ಬ ಮನೆಯ ಬೀಗ ಮುರಿದು 8 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣ ದೋಚಿ (gold theft) ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸರಪುರದಲ್ಲಿ ನಡೆದಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಬೆಂಗಳೂರು ಉತ್ತರ ತಾಲೂಕಿನ ದಾಸರಪುರ ನಿವಾಸಿಗಳಾದ ಕೃಷ್ಣಪ್ಪ ಹಾಗೂ ಮಂಜಮ್ಮ ದಂಪತಿಯ ಮನೆಯಲ್ಲಿ ಕಳ್ಳತನ ನಡೆದಿದೆ. ಈ ದಂಪತಿಯ ಮಗ ಮೋಹನ್ಗೆ ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮದುವೆಗಾಗಿ ಮಾಡಿಸಿದ್ದ ಸುಮಾರು 100 ಗ್ರಾಂ ತೂಕದ ಚಿನ್ನಾಭರಣಗಳನ್ನು ಮನೆಯ ಬೀರುವಿನಲ್ಲಿಯೇ ಇಡಲಾಗಿತ್ತು. ಘಟನಾ ದಿನದಂದು ತಾಯಿ ಮಂಜಮ್ಮ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದರೆ, ತಂದೆ ಕೃಷ್ಣಪ್ಪ ಹಾಗೂ ಮಗ ಮೋಹನ್ ತಮ್ಮ ಕೆಲಸದ ನಿಮಿತ್ತ ಹೊರಹೋಗಿದ್ದರು.
ಕೇವಲ ಒಂದು ಗಂಟೆಯಲ್ಲೇ ಕೈಚಳಕ ತೋರಿದ ಖದೀಮ
ಇತ್ತ ಇದೇ ಸಮಯಕ್ಕಾಗಿ ಕಾದುಕುಳಿತಿದ್ದ ಖದೀಮ, ಒಬ್ಬನೇ ಮನೆಗೆ ನುಗ್ಗಿ ಬೀರುವಿನ ಬೀಗ ಒಡೆದು ಅದರಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾನೆ. ಕೇವಲ ಒಂದು ಗಂಟೆಯಲ್ಲೇ ಖದೀಮ ತನ್ನ ಕೈಚಳಕ ತೋರಿಸಿದ್ದಾನೆ. ಇನ್ನು ಕಳ್ಳ ಒಡವೆಗಳನ್ನು ದೋಚಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳ್ಳನ ಪತ್ತೆಗೆ ಬಲೆ ಬೀಸಿದ ಪೊಲೀಸ್
ಕೆಲಸ ಮುಗಿಸಿ ಮನೆಗೆ ಬಂದಾಗ ಬೀರು ಒಡೆದಿರುವುದು ಹಾಗೂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದ್ದು, ಸಂತ್ರಸ್ತ ಕುಟುಂಬಸ್ಥರು ತಕ್ಷಣವೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್ ದರೋಡೆಗೆ ಯತ್ನ: ಮಾಲೀಕನ ಮೇಲೆ ಗುಂಡಿನ ದಾಳಿ
ಇನ್ನು ಚಿನ್ನಾಭರಣ ಕಳೆದುಕೊಂಡಿರುವ ಮಾಲೀಕರು ಆದಷ್ಟು ಬೇಗ ಒಡವೆಗಳನ್ನ ಹುಡುಕಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.