ಸೌದಿ ಅರೇಬಿಯಾ, ಆ.10: ಯೆಮೆನ್ನ ಇರಾನ್ ಬೆಂಬಲಿತ ‘ಹೌತಿ’ (Houthi) ಬಂಡುಕೋರರು ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಪ್ರಮುಖ ತೈಲ ಸಂಸ್ಥೆ ‘ಸೌದಿ ಅರಾಮ್ಕೋ’ದ ಜಿಜಾನ್ (Jazan) ಸಂಸ್ಕರಣಾಗಾರದ ಮೇಲೆ ರವಿವಾರ ಭೀಕರ ಡ್ರೋನ್ ದಾಳಿ ನಡೆಸಿದ್ದಾಗಿ ಹೊಣೆ ಹೊತ್ತುಕೊಂಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಸೌದಿಯ ಇಂಧನ ಮೂಲಸೌಕರ್ಯದ ಮೇಲೆ ಬಂಡುಕೋರರು ನಡೆಸಿದ ಎರಡನೇ ಪ್ರಮುಖ ದಾಳಿ ಇದಾಗಿದೆ.
ಹೌತಿ ಸೇನಾ ವಕ್ತಾರ ಯಹ್ಯಾ ಸಾರಿ (Yahya Saree) ಮಾತನಾಡಿ, “ಜಿಜಾನ್ನಲ್ಲಿರುವ ಅರಾಮ್ಕೋ ತೈಲ ಸಂಸ್ಕರಣಾಗಾರದ ಮೇಲೆ ನಿಖರವಾಗಿ ಡ್ರೋನ್ ದಾಳಿ ನಡೆಸುವಲ್ಲಿ ನಮ್ಮ ಪಡೆ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ. ಯೆಮೆನ್ನ ಹಜ್ಜಾ ಮತ್ತು ಸಾದಾ ಪ್ರಾಂತ್ಯಗಳ ಮೇಲೆ ಸೌದಿ ಪಡೆಗಳು ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ ಈ ಕೃತ್ಯ ಎಸಗಿರುವುದಾಗಿ ಅವರು ಹೇಳಿದ್ದಾರೆ.
ಸ್ಥಳೀಯ ಜಿಜಾನ್ ಅರಾಮ್ಕೋ ಘಟಕದಲ್ಲಿ ರವಿವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿರುವುದನ್ನು ಸೌದಿ ಅರೇಬಿಯಾದ ಇಂಧನ ಸಚಿವಾಲಯ ಪ್ರತ್ಯೇಕವಾಗಿ ದೃಢಪಡಿಸಿದೆ. ಸ್ಥಳೀಯ ಕೈಗಾರಿಕಾ ಭದ್ರತಾ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ, ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದನ್ನು ಸಚಿವಾಲಯ ಸ್ಪಷ್ಟಪಡಿಸಿಲ್ಲ.
ಜುಲೈ 26 ರಂದು ಹೌತಿ ಪಡೆಗಳು ಜಿಜಾನ್ ಮತ್ತು ಯಾನ್ಬು ಪ್ರಾಂತ್ಯಗಳಲ್ಲಿರುವ ಅರಾಮ್ಕೋ ಘಟಕಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದವು. ಬಂಡುಕೋರರು ಯೆಮೆನ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರದ ಅಧೀನದಲ್ಲಿರುವ ಪ್ರಮುಖ ‘ಮೊಖಾ’ ಬಂದರಿನ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಯೆಮೆನ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಗುಂಡಿಯಲ್ಲಿ ‘ಕೆರೆ-ದಂಡೆ’ ಆಟ: ಹಾಳಾದ ರಸ್ತೆ ವಿರುದ್ಧ ಯುವಕರ ವಿಶಿಷ್ಟ ಪ್ರತಿಭಟನೆ
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸೌದಿ ತೈಲ ಸಂಸ್ಥೆಗಳ ಮೇಲಿನ ದಾಳಿಯು ಜಾಗತಿಕ ತೈಲ ಪೂರೈಕೆ ಹಾಗೂ ಕೆಂಪು ಸಮುದ್ರದ ಜಲಸಾರಿಗೆ ಸುಗಮ ಸಂಚಾರಕ್ಕೆ ತೀವ್ರ ಆತಂಕ ತಂದೊಡ್ಡಿದೆ. ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ಶುಕ್ರವಾರ ಮೆಕ್ಕಾದಲ್ಲಿ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇನ್ನೊಂದೆಡೆ, ಅಮೆರಿಕ ಜೊತೆಗಿನ ಮಾತುಕತೆ ಮಧ್ಯಸ್ಥಿಕೆದಾರರ ಮೂಲಕ ಮಾತ್ರ ಸಾಗುತ್ತಿದ್ದು, ಯಾವುದೇ ನೇರ ಸಂಧಾನ ನಡೆಯುತ್ತಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ