ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ (Yash), ತಮ್ಮ ನಟನೆಯ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕೆ ಎರಡೆರಡು ಬಾರಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾದ ಪ್ರಚಾರವನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರಕ್ಕೆ ವೇಗ ನೀಡಬೇಕಾದ ಸಮಯದಲ್ಲಿ ಯಶ್ ಅವರು ಕಟಕಟೆಯಲ್ಲಿ ನಿಂತಿದ್ದಾರೆ. ಆದರೆ ಯಶ್ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವವರೇ ಯಶ್ ಅವರ ವ್ಯಕ್ತಿತ್ವಕ್ಕೆ ಫಿದಾ ಆಗಿದ್ದಾರೆ.
ಯಶ್, ಕಟಕಟೆಯಲ್ಲಿರುವುದು ನಿಜ, ಆದರೆ ಅದು ಅಸಲಿ ನ್ಯಾಯಾಲಯದ ಕಟಕಟೆ ಅಲ್ಲ ಬದಲಿಗೆ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ. ‘ಆಪ್ ಕಿ ಅದಾಲತ್’ ಭಾರತೀಯ ಟಿವಿ ಲೋಕದ ಬಹು ಹಳೆಯ ಶೋ. ರಜತ್ ಶರ್ಮಾ ಅವರು ದೇಶದ ಪ್ರಮುಖ ರಾಜಕಾರಣಿಗಳು, ಸಿನಿಮಾ ತಾರೆಯರು, ಟಿವಿ ತಾರೆಯರನ್ನು ಕರೆಸಿ, ಕಟಕೆಯಲ್ಲಿ ನಿಲ್ಲಿಸಿ ಪ್ರಶ್ನೆಗಳನ್ನು ಕೇಳುತ್ತಾರೆ. ಸೆಲೆಬ್ರಿಟಿಗಳು ಅದಕ್ಕೆ ಉತ್ತರ ನೀಡುತ್ತಾರೆ. ಮಾಜಿ ಪ್ರಧಾನಿಗಳು, ಹಾಲಿ ಪ್ರಧಾನಿಗಳು, ಬಾಲಿವುಡ್ನ ಖಾನ್ಗಳು ಇನ್ನೂ ಹಲವಾರು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಕಟಕಟೆಯಲ್ಲಿ ಕೂತಿದ್ದಾರೆ.
ಇದೀಗ ನಟ ಯಶ್ ಸಹ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಕಟಕಟೆಯಲ್ಲಿ ಕೂತು ರಜತ್ ಶರ್ಮಾ ಅವರ ಬೆಂಕಿಯುಂಡೆಯಂಥಹಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಯಶ್ ಅವರು ಭಾಗಿಯಾಗಿರುವ ಎಪಿಸೋಡ್ ನ ಚಿತ್ರೀಕರಣ ಆಗಿದ್ದು, ಶೀಘ್ರವೇ ಪ್ರಸಾರ ಆಗಲಿದೆ. ರಜತ್ ಶರ್ಮಾ ಅವರು ಯಶ್ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ದಿನಕ್ಕೆ ಎರಡು ಹೊತ್ತು ಊಟ ಕೂಡ ಪಡೆಯಲು ಸಹ ಕಷ್ಟ ಪಡುತ್ತಿದ್ದ ಈ ವ್ಯಕ್ತಿ ಈಗ ಕೋಟ್ಯಂತರ ಹಣ ಸಂಪಾದಿಸುತ್ತಾರೆ. ಇವರು ಪರದೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಬದಲಿಗೆ ಪರದೆಯನ್ನು ಹರಿದು ಹಾಕುತ್ತಾರೆ’ ಎಂದಿದ್ದಾರೆ ರಜತ್ ಶರ್ಮಾ.
ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು?
ಯಶ್, ಟಿವಿ ಸಂದರ್ಶನಗಳಿಂದ ದೂರವೇ ಉಳಿದಿರುತ್ತಾರೆ. ಆದರೆ ಇದೀಗ ರಜತ್ ಶರ್ಮಾ ಅವರ ಶೋಗೆ ಹೋಗಿದ್ದಾರೆ. ರಜತ್ ಶರ್ಮಾ ತಮ್ಮ ನೇರಾ-ನೇರಾ ಆರೋಪಗಳು ಪ್ರಶ್ನೆಗಳಿಗೆ ಹೆಸರುವಾಸಿ. ಕಹಿ ಪ್ರಶ್ನೆಗಳನ್ನೇ ಕೇಳುವುದು ಹೆಚ್ಚು. ಯಶ್ ಅವರಿಗೆ ರಜತ್ ಅವರು ಎಂಥಹಾ ಪ್ರಶ್ನೆಗಳನ್ನು ಹಾಕಿದ್ದಾರೆ, ಅವುಗಳಿಗೆ ಯಶ್ ಉತ್ತರ ಏನಾಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಗೀತೂ ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ನಯನತಾರಾ ಇನ್ನೂ ಕೆಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ