ಪೋರ್ಚುಗಲ್ ತಂಡದ ನೂತನ ನಾಯಕನಾಗಿ ಮೊಯ್ಸೆಸ್ ಹೆನ್ರಿಕ್ಸ್ (Moises Henriques) ಆಯ್ಕೆಯಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಹೆನ್ರಿಕ್ಸ್ ಇತ್ತೀಚೆಗಷ್ಟೇ ಪೋರ್ಚುಗಲ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಮುಂಬರುವ 2028ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ಕ್ವಾಲಿಫೈಯರ್ ಸಿ ಟೂರ್ನಿಯಲ್ಲಿ ಅವರು ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಪೋರ್ಚುಗೀಸ್ ಮೂಲ:
ಇತ್ತೀಚೆಗಷ್ಟೇ (ಜುಲೈ 2026) ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್ಗೆ ವಿದಾಯ ಹೇಳಿದ್ದ 39 ವರ್ಷದ ಹೆನ್ರಿಕ್ಸ್, ಐಸಿಸಿ (ICC) ನಿಯಮಗಳ ಅಡಿಯಲ್ಲಿ ತಮಗಿರುವ ಅರ್ಹತೆಯನ್ನು ಬಳಸಿಕೊಂಡು ಪೋರ್ಚುಗಲ್ ಪರ ಆಡಲು ಸಜ್ಜಾಗಿದ್ದಾರೆ.
ಐಸಿಸಿ ನಿಯಮಾವಳಿಗಳ ಪ್ರಕಾರ, ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರದಿಂದ ಅಸೋಸಿಯೇಟ್ ಸದಸ್ಯ ರಾಷ್ಟ್ರಕ್ಕೆ ಬದಲಾಗಲು ಬೇಕಾದ ಕಡ್ಡಾಯ 3 ವರ್ಷಗಳ ‘ಸ್ಟ್ಯಾಂಡ್-ಡೌನ್’ ಅವಧಿಯನ್ನು ಹೆನ್ರಿಕ್ಸ್ ಈಗಾಗಲೇ ಪೂರೈಸಿದ್ದಾರೆ. ಈ ಕಾರಣದಿಂದಾಗಿ ಅವರು ತಮ್ಮ ಜನ್ಮ ನೀಡಿದ ದೇಶದ ಪರವಾಗಿ ಆಡಲು ಈಗ ಸಂಪೂರ್ಣ ಅರ್ಹರಾಗಿದ್ದಾರೆ.
ಇತ್ತ ಪೋರ್ಚುಗಲ್ ತಂಡಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ಗೆ ನಾಯಕತ್ವ ಕೂಡ ಲಭಿಸಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಮೊಯ್ಸೆಸ್ ಹೆನ್ರಿಕ್ಸ್ ಮುಂದಾಳತ್ವದಲ್ಲಿ ಪೋರ್ಚುಗಲ್ ಪಡೆ ಕಣಕ್ಕಿಳಿಯಲಿದೆ.
ಪೋರ್ಚುಗಲ್ ತಂಡದ ವೇಳಾಪಟ್ಟಿ (ಗ್ರೂಪ್ ಬಿ):
ಐಸಿಸಿ ಟಿ20 ಶ್ರೇಯಾಂಕದಲ್ಲಿ 37ನೇ ಸ್ಥಾನದಲ್ಲಿರುವ ಪೋರ್ಚುಗಲ್ ತಂಡವು ಗ್ರೂಪ್ ‘ಬಿ’ ನಲ್ಲಿದ್ದು, ಈ ಕೆಳಗಿನ ದಿನಗಳಂದು ಟಿ20 ವಿಶ್ವಕಪ್ನ ಅರ್ಹತಾ ಪಂದ್ಯಗಳನ್ನು ಆಡಲಿದೆ:
- ಆಗಸ್ಟ್ 14: vs ಇಸ್ರೇಲ್
- ಆಗಸ್ಟ್ 15: vs ಜರ್ಮನಿ
- ಆಗಸ್ಟ್ 17: vs ಗ್ರೀಸ್ ವಿರುದ್ಧ
- ಆಗಸ್ಟ್ 20: vs ಜೆಕಿಯಾ
ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಆಗಸ್ಟ್ 21 ರಂದು ನಡೆಯುವ ಸಬ್-ರೀಜನಲ್ ಫೈನಲ್ನಲ್ಲಿ ಗ್ರೂಪ್ ‘ಎ’ ವಿಜೇತರನ್ನು ಎದುರಿಸಲಿದೆ. ಅಲ್ಲಿ ಗೆದ್ದರೆ ಮಾತ್ರ ಮುಂದಿನ ಪ್ರಾದೇಶಿಕ ಫೈನಲ್ಸ್ ತಲುಪಲು ಸಾಧ್ಯವಾಗುತ್ತದೆ.
ಅನುಭವಿ ಆಟಗಾರರ ಬಲ:
ಮಾಜಿ ನಾಯಕ ಕಾರ್ಲೋಸ್ ನೂನ್ಸ್ ಅವರಿಂದ ನಾಯಕತ್ವದ ಜವಾಬ್ದಾರಿ ಪಡೆದಿರುವ ಮೊಯ್ಸೆಸ್ ಹೆನ್ರಿಕ್ಸ್ ಅವರಿಗೆ ಸಾಥ್ ನೀಡಲು ತಂಡದಲ್ಲಿ ಹಲವು ವಿದೇಶಿ ಲೀಗ್ಗಳ ಅನುಭವವಿರುವ ಆಟಗಾರರಿದ್ದಾರೆ. ಸಸೆಕ್ಸ್ ಕೌಂಟಿ ಪರ ಆಡಿದ್ದ ಕ್ರೇಗ್ ಕ್ಯಾಚೋಪಾ, ಸೌತ್ ಆಫ್ರಿಕಾ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಕ್ಯಾಮರೋನ್ ಶೆಕ್ಲೆಟನ್ ಮತ್ತು ಸೆಬಾಸ್ಟಿಯನ್ ಡಿ ಒಲಿವೇರಾ ಅವರಂತಹ ಬಲಿಷ್ಠ ಆಟಗಾರರು 14 ಸದಸ್ಯರ ಪೋರ್ಚುಗಲ್ ತಂಡದಲ್ಲಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!
ಆಸ್ಟ್ರೇಲಿಯಾ ಪರ 4 ಟೆಸ್ಟ್, 16 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನು ಆಡಿರುವ, ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಸೇರಿದಂತೆ ಹಲವು ತಂಡಗಳ ಪರ ಆಡಿರುವ ಮೊಯ್ಸೆಸ್ ಹೆನ್ರಿಕ್ಸ್ ಅವರ ಅಪಾರ ಅನುಭವ ಪೋರ್ಚುಗಲ್ ಕ್ರಿಕೆಟ್ನ ಇತಿಹಾಸವನ್ನೇ ಬದಲಾಯಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.