ಬೆಂಗಳೂರು, ಆಗಸ್ಟ್ 12: ನಗರದ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ (CCB) ದಾಳಿ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಮೊಬೈಲ್ಗಳು ಪತ್ತೆ ಆಗಿವೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ‘ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣರನ್ನು ಸಸ್ಪೆಂಡ್ ಮಾಡಿದ್ದೇನೆ. ಎಸ್ಪಿ ಅನ್ಶುಕುಮಾರ್ಗೆ ನೋಟಿಸ್ ನೀಡಿ ಮಾಹಿತಿ ಕೇಳಿದ್ದೇನೆ’ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್, ಚಾರ್ಜರ್ ಪತ್ತೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿದ್ದು, ‘ನಿನ್ನೆ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್, ಚಾರ್ಜರ್ ಪತ್ತೆಯಾಗಿದೆ. ಆತನ ಮೊಬೈಲ್ನಲ್ಲಿ ಒಟಿಟಿ ಆ್ಯಪ್ಗಳು ಪತ್ತೆಯಾಗಿವೆ. ಜೈಲಿನ ವೈಫೈ ಏನಾದರೂ ಬಳಕೆ ಆಗಿದೆಯಾ ಎಂದು ಪರಿಶೀಲನೆ ಮಾಡ್ತೀನಿ’ ಎಂದಿದ್ದಾರೆ.
‘ಈ ಹಿಂದೆ ಸರಬರಾಜು ಆದ ಮೊಬೈಲ್ಗಳು ಇನ್ನೂ ಒಳಗೆ ಇದೆ. ಕೆಲ ದಿನಗಳ ಹಿಂದೆ ನಾವು ದಾಳಿ ಮಾಡಿದ್ದಾಗ ಏನೂ ಸಿಕ್ಕಿರಲಿಲ್ಲ. ಸದ್ಯ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣರನ್ನು ಸಸ್ಪೆಂಡ್ ಮಾಡಿದ್ದೇನೆ. ಎಸ್ಪಿ ಅನ್ಶುಕುಮಾರ್ಗೆ ನೋಟಿಸ್ ನೀಡಿ ಮಾಹಿತಿ ಕೇಳಿದ್ದೇನೆ’ ಎಂದು ಅವರು ಹೇಳಿದರು.
ಮುಲಾಜಿಲ್ಲದೆ ಸಸ್ಪೆಂಡ್ ಎಂದ ಅಲೋಕ್ ಕುಮಾರ್
ಇನ್ನು ‘ಕೈದಿಗಳ ಜೊತೆಗೆ ಜೈಲಿನ ಅಧಿಕಾರಿಗಳೇ ಶಾಮೀಲು ಆಗಿದ್ದಾರೆ ಎಂದಿರುವ ಅಲೋಕ್ ಕುಮಾರ್, ಅಧಿಕಾರಿಗಳ ಕೈವಾಡ ಗೊತ್ತಾದರೆ ಮುಲಾಜಿಲ್ಲದೆ ಸಸ್ಪೆಂಡ್ ಮಾಡುತ್ತೇನೆ. ಸರ್ಕಾರ ಕೆಲಸ, ಊಟ ಕೊಟ್ಟಿದೆ ಅಂದರೆ ಅದಕ್ಕೆ ನಿಯತ್ತಾಗಿರಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧ ಸಮರ: ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ
‘ಮಂಗಳವಾರ ಸಿಸಿಬಿ ದಾಳಿ ನಡೆಸಿ ಹೋದ ಮೇಲೆ ಜೈಲು ಅಧಿಕಾರಿಗಳಿಗೆ ಮತ್ತೆ ಎರಡು ಮೊಬೈಲ್ ಸಿಕ್ಕಿದೆ. ಇನ್ನೂ ಶೇ.10ರಷ್ಟು ಮೊಬೈಲ್ಗಳು ಒಳಗೆ ಇರುವ ಸಾಧ್ಯತೆ ಇದೆ’ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.