Headlines

Independence Day 2026: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು – Kannada News | These are the countries that celebrate Independence Day on August 15, like India

ಪ್ರತಿ ವರ್ಷ, ಭಾರತವು ಆಗಸ್ಟ್ 15 ರಂದು ತನ್ನ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸುತ್ತದೆ. 1947 ರ ಈ ದಿನ ನಮ್ಮ ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಿತು. ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಹೋರಾಟಗಳು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಹಾಗಾಗಿ ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನವಾಗಿದೆ. ಅಲ್ಲದೆ ಪ್ರತಿವರ್ಷವೂ ಸಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವಂತೆ ಈ ಕೆಲವು ದೇಶಗಳೂ ಸಹ ಇದೇ ದಿನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಆ ದೇಶಗಳು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಭಾರತದಂತೆ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳು:

ದಕ್ಷಿಣ ಕೊರಿಯಾ: ಭಾರತದಂತೆಯೇ, ದಕ್ಷಿಣ ಕೊರಿಯಾ ಕೂಡ ಆಗಸ್ಟ್ 15 ರಂದು ಸ್ವಾತಂತ್ರ್ಯ ಗಳಿಸಿತು. ಈ ದೇಶ ಆಗಸ್ಟ್ 15, 1945 ರಂದು ಜಪಾನ್‌ನಿಂದ ಸ್ವಾತಂತ್ರ್ಯ ಗಳಿಸಿತು. ಅಮೆರಿಕ ಮತ್ತು ಸೋವಿಯತ್ ಪಡೆಗಳು ಕೊರಿಯಾವನ್ನು ಜಪಾನಿನ ಆಕ್ರಮಣದಿಂದ ಮುಕ್ತಗೊಳಿಸಿದವು. ಈ ದಿನವನ್ನು ದಕ್ಷಿಣ ಕೊರಿಯಾದಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ.

ಉತ್ತರ ಕೊರಿಯಾ: ದಕ್ಷಿಣ ಕೊರಿಯಾದಂತೆ, ಉತ್ತರ ಕೊರಿಯಾ ಕೂಡ ಆಗಸ್ಟ್ 15 ರಂದು ಸ್ವಾತಂತ್ರ್ಯ ಗಳಿಸಿತು. ಇದು 1945 ರ ಈ ದಿನದಂದು ಜಪಾನಿನ ಆಕ್ರಮಣದಿಂದ ಮುಕ್ತಗೊಂಡಿತು. ವಾಸ್ತವವಾಗಿ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎರಡೂ ಒಂದೇ ದೇಶವಾಗಿತ್ತು. ಆದರೆ ಸ್ವಾತಂತ್ರ್ಯ ಗಳಿಸಿದ ಮೂರು ವರ್ಷಗಳ ನಂತರ, ಅವು ವಿಭಜನೆಯಾಗಿ ಪ್ರತ್ಯೇಕ ದೇಶಗಳಾದವು.

ಬಹ್ರೇನ್: ಬಹ್ರೇನ್ ಪರ್ಷಿಯನ್ ಕೊಲ್ಲಿಯಲ್ಲಿರುವ ಒಂದು ಸಣ್ಣ ದೇಶ. ಆಗಸ್ಟ್ 15 ರಂದು ಬಹ್ರೇನ್ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಈ ದೇಶ ಆಗಸ್ಟ್ 15, 1971 ರಂದು ಸ್ವಾತಂತ್ರ್ಯ ಪಡೆಯಿತು. 1960 ರ ದಶಕದಿಂದಲೂ ಬ್ರಿಟಿಷ್ ಪಡೆಗಳು ಬಹ್ರೇನ್ ಅನ್ನು ತೊರೆಯಲು ಪ್ರಾರಂಭಿಸಿದ್ದವು. ಆಗಸ್ಟ್ 15 ರಂದು ಎರಡೂ ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಅದರ ನಂತರ ಬಹ್ರೇನ್ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಯಿತು. ಆದರೆ ಬಹ್ರೇನ್‌ನಲ್ಲಿ ಡಿಸೆಂಬರ್ 16 ರಂದು ರಾಷ್ಟ್ರೀಯ ದಿನವನ್ನು ಅಧಿಕೃತವಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ಸುಲಭವಾಗಿ ‘ತ್ರಿವರ್ಣ’ ಖಾದ್ಯ ತಯಾರಿಸಿ; ರೆಸಿಪಿ ಇಲ್ಲಿದೆ

ಲಿಚ್ಟೆನ್‌ಸ್ಟೈನ್: ಲೀಚ್ಟೆನ್‌ಸ್ಟೈನ್ ಎಂಬ ಯುರೋಪಿನ ಪುಟ್ಟ ರಾಷ್ಟ್ರ ಕೂಡ ಆಗಸ್ಟ್‌ 15 ರಂದೇ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಈ ದೇಶವು ಆಗಸ್ಟ್ 15, 1866 ರಂದು ಜರ್ಮನ್ ಆಕ್ರಮಣದಿಂದ ಮುಕ್ತವಾಯಿತು. 1940 ರಿಂದ, ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾದ ಲೀಚ್ಟೆನ್‌ಸ್ಟೈನ್, ಭಾರತದಂತೆಯೇ ಈ ದಿನದಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾ ಬರುತ್ತಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ: ಆಫ್ರಿಕಾದ ಕಾಂಗೋ ದೇಶವು ಆಗಸ್ಟ್ 15, 1960 ರಂದು ಫ್ರಾನ್ಸ್‌ನ ದಾಸ್ಯದಿಂದ ಮುಕ್ತವಾಗಿ  ಸ್ವಾತಂತ್ರ್ಯ ಪಡೆಯಿತು. ನಂತರ ಅದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಫ್ರೆಂಚ್ ಆಕ್ರಮಣದಲ್ಲಿದ್ದಾಗ ಈ ರಾಷ್ಟ್ರವನ್ನು ಫ್ರೆಂಚ್ ಕಾಂಗೋ ಎಂದು ಕರೆಯಲಾಗುತ್ತಿತ್ತು. ಕಾಂಗೋ ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತದೆ. ಈ ದಿನದಂದು ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *