ಬಾಂಗ್ಲಾದೇಶ ಬರೋಬ್ಬರಿ 23 ವರ್ಷಗಳ ನಂತರ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಪಂದ್ಯದ ಮೊದಲ ದಿನವೇ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ.
ಡಾರ್ವಿನ್ನಲ್ಲಿ ನಡೆಯುತ್ತಿರುವ ಟೆಸ್ಟ್ನ ಮೊದಲ ದಿನದಂದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಬ್ಯಾಟಿಂಗ್ ವಿಭಾಗವನ್ನು ಬಾಂಗ್ಲಾದೇಶದ ವೇಗದ ಬೌಲರ್ಗಳು ಕಟ್ಟಿಹಾಕಿದ್ದಾರೆ. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಮೊದಲ ದಿನದ ಮೂರನೇ ಸೆಷನ್ನ ವೇಳೆಗೆ ಕೇವಲ 198 ರನ್ಗಳಿಗೆ ಆಲೌಟ್ ಆಯಿತು.
ಆಸ್ಟ್ರೇಲಿಯಾ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಬಾಂಗ್ಲಾದೇಶದ ವೇಗಿ ಹಸನ್ ಮಹಮೂದ್ ಪ್ರಮುಖ ಪಾತ್ರವಹಿಸಿದರು. ಹಸನ್ ಮಹಮೂದ್ ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ಆರಂಭಿಕ ಟ್ರಾವಿಸ್ ಹೆಡ್ ಮತ್ತು ಅನುಭವಿ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಸೇರಿದಂತೆ ಬರೋಬ್ಬರಿ ಆರು ಆಟಗಾರರನ್ನು ಔಟ್ ಮಾಡಿದರು.
ಈ 6 ವಿಕೆಟ್ಗಳ ಗೊಂಚಲು ಪಡೆಯುವ ಮೂಲಕ ಹಸನ್ ಮಹಮೂದ್ ಆಸ್ಟ್ರೇಲಿಯಾದಲ್ಲಿ ದಾಖಲೆ ಕೂಡ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಇನ್ನಿಂಗ್ಸ್ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಬಾಂಗ್ಲಾದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಸನ್ ಮಹಮೂದ್ ಮೊದಲ ಇನ್ನಿಂಗ್ಸ್ನಲ್ಲಿ 17 ಓವರ್ಗಳನ್ನು ಬೌಲ್ ಮಾಡಿ 55 ರನ್ ನೀಡಿ 6 ವಿಕೆಟ್ ಕಬಳಿಸಿದರು. 3.20 ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟ ಹಸನ್ ಮಹಮೂದ್, ಜೇಕ್ ವೆದರೋಲ್ಡ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ನಾಥನ್ ಲಿಯಾನ್ ಅವರ ವಿಕೆಟ್ಗಳನ್ನು ಕಬಳಿಸಿದರು.




