Headlines

ಅನುದಾನ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಖಾಲಿ ಖಾಲಿ – Kannada News | Government Hospitals Face Critical Medicine Shortage, Patients Suffer Amid Official Negligence

ಗದಗ ಸರ್ಕಾರಿ ಆಸ್ಪತ್ರೆImage Credit source: tv9 kannada

ಗದಗ, ಆಗಸ್ಟ್​ 16: ಸರ್ಕಾರಿ ಆಸ್ಪತ್ರೆ (government hospital) ಅಂದರೆ ಬಡವರ ಪಾಲಿನ ಸಂಜೀವಿನಿ ಎನ್ನುತ್ತಾರೆ. ಹೀಗಾಗಿ ಸಾಕಷ್ಟು ಜನರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ ಗದಗ (gadag) ಜಿಲ್ಲೆಯಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಸಂಪೂರ್ಣ ಹೆದಗೆಟ್ಟು ಹೋಗಿದೆ. ಔಷಧಿಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನುದಾನದ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಆಸ್ಪತ್ರೆಗಳಿಗೆ ಸಮರ್ಪಕ ಔಷಧಿಗಳು ಪೂರೈಕೆ ಆಗುತ್ತಲ್ಲವೆಂದು ಜನರು ಕಿಡಿಕಾರಿದ್ದಾರೆ. ಸದ್ಯ ಈ ಸಮಸ್ಯೆ ಆಸ್ಪತ್ರೆ ಸಿಬ್ಬಂದಿಗೆ ತಲೆನೋವಾಗಿದೆ.

ಔಷಧಿ ಸಿಗದೇ ರೋಗಿಗಳು ಗೋಳಾಟ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿಂದ ಔಷಧಿಗಳು ಸರಿಯಾಗಿ ಸಿಗುತ್ತಿಲ್ಲ ಅಂತ ರೋಗಿಗಳು ಗೋಳಾಡುತ್ತಿದ್ದಾರೆ. ಹೊಳೆಆಲೂರ ಸುತ್ತಮುತ್ತ 20 ಗ್ರಾಮಗಳ‌ ಬಡ ಜನರು ಏನೇ ಆರೋಗ್ಯ ಸಮಸ್ಯೆ ಇದ್ದರೂ ಇದೇ ಆಸ್ಪತ್ರೆಗೆ ಬರುತ್ತಾರೆ. ನಿತ್ಯ ನೂರಾರು ರೋಗಿಗಳು ಆಗಮಿಸುತ್ತಿದ್ದು, ವೈದ್ಯರು ಬರೆದುಕೊಟ್ಟ ಔಷಧಿಗಳು ಈ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುದಾನ ಕೊರತೆಯೋ, ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Gadag Government Hostel Raid: ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ

ಇನ್ನು ಈ ಆಸ್ಪತ್ರೆಗೆ ಎಷ್ಟು ಪ್ರಮಾಣದಲ್ಲಿ ಔಷಧಿಗಳು ಬೇಕು ಅಷ್ಟು ಪ್ರಮಾಣದಲ್ಲಿ ಸಮರ್ಪಕವಾಗಿ ಔಷಧಿ ಪೂರೈಕೆ ಆಗುತ್ತಿಲ್ಲವಂತೆ. ಜ್ವರ, ಮೈಕೈ ನೋವು ಸೇರಿ ಸಣ್ಣಪುಟ್ಟ ಕಾಯಿಲೆಗಳ ಕೆಲವು ಔಷಧಿಗಳು ಮಾತ್ರ ಲಭ್ಯವಿವೆ. ಸಾಕಷ್ಟು ಔಷಧಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ಮಕ್ಕಳ ಔಷಧಿಗಳು ಇಲ್ಲ ಅಂತ ತಾಯಂದಿರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಹಾಗೂ ರೋಗಿಗಳ ನಡುವೆ ವಾಗ್ವಾದ

ನಿತ್ಯ ಕೂಡ ಔಷಧ ವಿಭಾಗದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ವಾಗ್ವಾದ ಸಾಮಾನ್ಯವಾಗಿದೆ. ಟಿವಿ9ಗೆ ಲಭ್ಯವಾದ ಮಾಹಿತಿ ಪ್ರಕಾರ ಎಲ್ಲ ಪ್ರಕಾರದ ಆ್ಯಂಟಿ ಬಯೋಟಿಕ್ ಸೇರಿ ಹಲವು ಮಾತ್ರೆಗಳ ಕೊರತೆ ಇವೆಯಂತೆ. ಕೆಲ ಇಂಜೆಕ್ಷನ್​​ಗಳು‌ ಕೂಡ ಇಲ್ಲವಂತೆ. ಹೀಗಾಗಿ ಆಸ್ಪತ್ರೆಗೆ ಬಂದ ಬಡ ರೋಗಗಳು‌ ಕಂಗಾಲಾಗಿದ್ದಾರೆ. ನಾವು ಬಡವರು ಹಣ ಕೊಟ್ಟು ಔಷಧಿ ಖರೀದಿ ಮಾಡಲು ಆಗುತ್ತಾ ಅಂತ ಎನ್ನುತ್ತಿದ್ದಾರೆ. ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಏಕೆ ಬರಬೇಕು. ವೈದ್ಯರು ಬರೆದುಕೊಟ್ಟ ಕೆಲ ಔಷಧಿ ಇಲ್ಲ ಅಂತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಖಾಲಿಯಾಗಿವೆ. ಇಂಡೆಂಟ್ ಹಾಕಿದ ಅರ್ಧದಷ್ಟು ಔಷಧಿ ಮಾತ್ರ ಪೂರೈಕೆ ಆಗ್ತಾವೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ಬೇಕಾದಷ್ಟು ಔಷಧಿಗಳು ಅಧಿಕಾರಿಗಳು ಪೂರೈಕೆ ಮಾಡುತ್ತಿಲ್ಲ. ಆದರೆ ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕೇಳಿದರೆ ಔಷಧಿ ಕೊರತೆ ಇಲ್ಲ. ನಮ್ಮ ಸರ್ಕಾರಿ ಸ್ಟೋರ್​ನಿಂದ ಪೂರೈಕೆ ಸಮಸ್ಯೆ ಇದೆ. ಹೀಗಾಗಿ ಹೊರಗಡೆಯಿಂದ ಖರೀದಿ ಮಾಡಿ ಪೂರೈಕೆ ಮಾಡ್ತಾಯಿದ್ದೇವೆ ಎಂದು ಗದಗ ಡಿಎಚ್ಓ ಡಾ. ಎಸ್ ಎಸ್ ನಿಲಗುಂದ ಹೇಳಿದ್ದಾರೆ.

ಮಕ್ಕಳ ಔಷಧಿಯೂ ಕೊರತೆ 

ಇನ್ನು ಮಕ್ಕಳ ಔಷಧಿಗಳು ಕೂಡ ಖಾಲಿಯಾಗಿವೆ. ಈಗಿನ ವಾತಾವರಣದಿಂದ ಮಕ್ಕಳ ಆರೋಗ್ಯದಲ್ಲಿ ವ್ಯಾತ್ಯಾಸ ಆಗ್ತಾಯಿದೆ. ಹಾಗಾಗಿ ಆಸ್ಪತ್ರೆಗೆ ಬಂದರೆ, ಆಸ್ಪತ್ರೆಯಲ್ಲಿ ಮಕ್ಕಳ ವಿವಿಧ ಪ್ರಕಾರದ ಸಿರಪ್, ಔಷಧಿಗಳ ಕೊರತೆ ಉಂಟಾಗಿದೆ. ರಾತ್ರಿ ಸಮಯದಲ್ಲಿ ಗರ್ಭಿಣಿಯರು ಹೆರಿಗೆ ಬಂದ್ರೆ ಯಾರೂ ಇರಲ್ಲ ಅಂತ ಕಿಡಿಕಾರಿದ್ದಾರೆ. ಸದ್ಯ ಈ ಔಷಧಿ ಕೊರತೆ ವೈದ್ಯರು, ಸಿಬ್ಬಂದಿಗೆ ತಲೆ ನೋವಾಗಿದೆ. ಇನ್ನಾದರೂ ರೋಣ ತಾಲೂಕಾ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಆಸ್ಪತ್ರೆಗಳಿಗೆ ಅಗತ್ಯ ಔಷಧಿ ಪೂರೈಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *