ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ (ಸಂಗ್ರಹ ಚಿತ್ರ)Image Credit source: tv9 kannada
ಧಾರವಾಡ, ಆಗಸ್ಟ್ 16: ಉದ್ಯೋಗಕ್ಕಾಗಿ ಹಕ್ಕೊತ್ತಾಯ ಮಂಡಿಸಲು ಸಜ್ಜಾಗುತ್ತಿದ್ದ ಸಾವಿರಾರು ನಿರುದ್ಯೋಗಿ ಯುವಜನರ ಹೋರಾಟಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಆಗಸ್ಟ್ 18ರಂದು ಧಾರವಾಡದಲ್ಲಿ (dharwad) ಪ್ರತಿಭಟನೆ ನಡೆಸಲು ಅನುಮತಿ ಕೋರಿದ್ದ ಉದ್ಯೋಗಾಕಾಂಕ್ಷಿಗಳ (job aspirants) ‘ಆಕ್ಸಾ’ ಸಂಘಟನೆಯ ಮನವಿಯನ್ನು ಪೊಲೀಸ್ ಇಲಾಖೆ ತಿರಸ್ಕರಿಸಿದೆ. ಹಳೆಯ ಘಟನೆ ಉಲ್ಲೇಖಿಸಿ ಉಪನಗರ ಠಾಣೆಯ ಪೊಲೀಸರು ಪ್ರತಿಭಟನೆಗೆ (protest) ಅವಕಾಶ ನಿರಾಕರಿಸಿದ್ದಾರೆ.
ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಣೆ
ಆಕ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ಧಾರವಾಡದ ಮಿಚಿಗನ್ ಕಾಂಪೌಂಡ್ ಬಳಿ ಹೋರಾಟ ನಡೆಸಲು ಅನುಮತಿ ಕೋರಲಾಗಿತ್ತು. ಆದರೆ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನಿರ್ದೇಶನದಂತೆ ಉಪನಗರ ಠಾಣೆಯ ಪೊಲೀಸರು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿತ್ತು ಬ್ರೇಕ್
ಈ ಹಿಂದೆ ಧಾರವಾಡ ಹೈಕೋರ್ಟ್ ಪೀಠವು ನಗರದ ನೆಹರು ಮೈದಾನದಲ್ಲಿ ಗರಿಷ್ಠ 100 ಜನರಿಗೆ ಸೀಮಿತವಾಗಿ ಶಾಂತಿಯುತ ಪ್ರತಿಭಟನೆ ನಡೆಸಲು ಷರತ್ತುಬದ್ಧ ಅವಕಾಶ ಕಲ್ಪಿಸಿತ್ತು. ಆದರೆ, ಸಂಘಟಕರು ನ್ಯಾಯಾಲಯ ಸೂಚಿಸಿದ ಸ್ಥಳದಲ್ಲಿ ಪ್ರತಿಭಟನೆ ಮಾಡಿರಲಿಲ್ಲ. ಇದೀಗ ಮಿಚಿಗನ್ ಕಾಂಪೌಂಡ್ ಬಳಿ ಧರಣಿಗೆ ಅನುಮತಿ ಕೇಳಿದ್ದಾರೆ. ಹೀಗಾಗಿ ಉಪನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಹಿಂದೊಮ್ಮೆ ಅನುಮತಿ ನಿರಾಕರಣೆ
ಇನ್ನು ಉದ್ಯೋಗಾಕಾಂಕ್ಷಿಗಳು ಮತ್ತು ಧಾರವಾಡ ಪೊಲೀಸರ ನಡುವಿನ ಈ ತಿಕ್ಕಾಟ ಇಂದು ನಿನ್ನೆಯದಲ್ಲ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಹೋರಾಟ ನಡೆದಿತ್ತು. ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ನಡೆದಿದ್ದ ಹೋರಾಟ ರಾಜ್ಯದ ಜನರು ಸೇರಿದಂತೆ ಸರ್ಕಾರದ ಗಮನವನ್ನು ಸೆಳೆದಿತ್ತು. ಸರ್ಕಾರ ಕೆಲ ಭರವಸೆಗಳನ್ನು ನೀಡಿ ಸಮಾಧಾನ ಮಾಡಿತ್ತು.
ಇದನ್ನೂ ಓದಿ: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್: ಷರತ್ತು ಅನ್ವಯ
ಆದರೆ ಅಷ್ಟಕ್ಕೆ ಸುಮ್ಮನಾಗದ ಉದ್ಯೋಗಾಕಾಂಕ್ಷಿಗಳು, ಸ್ವಲ್ಪ ದಿನಗಳ ನಂತರ ಮತ್ತೆ ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಆ ವೇಳೆ ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಬಳಿಕ ಕೋರ್ಟ್ ಮೆಟ್ಟಿಲೇರಿದ ಉದ್ಯೋಗಾಕಾಂಕ್ಷಿಗಳಿಗೆ ಷರತ್ತುಬದ್ಧ ಹೋರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೆ ವೇಳೆ ಕೆಲ ಅಹಿತಕರ ಘಟನೆಗಳು ಸಂಭವಿಸಿದ್ದವು. ಆ ಕಹಿ ಘಟನೆಗಳನ್ನು ಉಲ್ಲೇಖಿಸಿರುವ ಪೊಲೀಸರು, ಸಾರ್ವಜನಿಕ ಶಾಂತಿಗೆ ಭಂಗ ಬರಬಾರದೆಂಬ ಕಾರಣಕ್ಕೆ ಸದ್ಯದ ಹೋರಾಟಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.