ಬಿಗ್ಬಾಸ್ ಶೋ (Bigg Boss Show) ಗೆದ್ದವರಿಗೆ ಲಕ್ಷಾಂತರ ರೂಪಾಯಿ ಬಹುಮಾನ ಸಿಗುತ್ತದೆ. ಒಳ್ಳೆಯ ಕಾರು ಸಿಗುತ್ತದೆ. ಭರ್ಜರಿ ಸಂಭಾವನೆ ಸಿಗುತ್ತದೆ ಎಂದು ವೀಕ್ಷಕರು ನಂಬಿಕೊಂಡಿದ್ದಾರೆ. ಬಿಗ್ಬಾಸ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಸಿಗುವುದೇನೋ ನಿಜ ಆದರೆ ಅದು ಕೈಗೆ ಬರುವಷ್ಟರಲ್ಲಿ ಸಾಕಷ್ಟು ಹಣ ಕಟ್ ಆಗಿ ಸರ್ಕಾರ ಇನ್ನಿತರೆಗಳ ಪಾಲಾಗಿರುತ್ತದೆ. ಕಾರಿನ ಕತೆಯೂ ಸಹ ಭಿನ್ನ ಏನಲ್ಲ. ಬಿಗ್ಬಾಸ್ ಗೆದ್ದವರಿಗೆ ಕೊನೆಗೆ ಕೈಗೆ ಬರುವುದೆಷ್ಟು ಎಂಬುದನ್ನು ವಿವರಿಸಿದ್ದಾರೆ ಈ ಹಿಂದೆ ಬಿಗ್ಬಾಸ್ ಗೆದ್ದಿರುವ ಸ್ಪರ್ಧಿ.
ಬಿಗ್ ಬಾಸ್ ಕನ್ನಡದ ರೀತಿಯೇ ತೆಲುಗು ಬಿಗ್ಬಾಸ್ ಸಹ ಜನಪ್ರಿಯ ಶೋ. ಈಗ ಈ ತೆಲುಗು ಬಿಗ್ಬಾಸ್ನ ಹತ್ತನೇ ಸೀಸನ್ ಪ್ರಾರಂಭ ಆಗುತ್ತಿದೆ. ಆದರೆ ತೆಲುಗು ಬಿಗ್ಬಾಸ್ನ ಏಳನೇ ಸೀಸನ್ಲಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಯುವ ರೈತ ಪಲ್ಲವಿ ಪ್ರಶಾಂತ್ ಭಾಗಿ ಆಗಿದ್ದರು. ಯಾರೂ ಊಹೆ ಸಹ ಮಾಡದ ರೀತಿ ಆಟವಾಡಿದ್ದ ಪಲ್ಲವಿ ಪ್ರಶಾಂತ್ ಫಿನಾಲೆಯಲ್ಲಿ ಗೆದ್ದು ಚಾಂಪಿಯನ್ ಆದರು. ಪಲ್ಲವಿ ಪ್ರಶಾಂತ್ ಅವರಿಗೆ 35 ಲಕ್ಷ ರೂ ನಗದು, ಒಂದು ಮಾರುತಿ ಬ್ರೆಜಾ ಕಾರು ಹಾಗೂ 15 ಲಕ್ಷ ಮೌಲ್ಯದ ಆಭರಣವನ್ನು ನೀಡಲಾಗಿತ್ತು.
ಪಲ್ಲವಿ ಪ್ರಶಾಂತ್ ತನ್ನ ಬಿಗ್ ಬಾಸ್ ಪ್ರೈಜ್ ಮನಿಯ ಸಂಪೂರ್ಣ ಮೊತ್ತವನ್ನು ರೈತರಿಗೆ ಹಂಚುವುದಾಗಿ ದೊಡ್ಡ ಹೇಳಿಕೆ ನೀಡಿದ್ದರು. ಆದರೆ ಆ ಬಳಿಕ ಹಣ ಕೊಡುವ ವಿಚಾರವನ್ನು ನಿರ್ಲಕ್ಷಿಸಿದರು. ಆದರೆ ಇತ್ತೀಚೆಗೆ ಈ ವಿಷಯದ ಬಗ್ಗೆ ಸ್ಪಂದಿಸಿದ ಪಲ್ಲವಿ ಪ್ರಶಾಂತ್, ಬಿಗ್ ಬಾಸ್ ಆಯೋಜಕರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ಪ್ರೈಜ್ ಮನಿ, ಕಾರು ಮತ್ತು ನೆಕ್ಲೇಸ್ ಎಂದು ಹೇಳಿ ತನ್ನನ್ನು ಸಂಪೂರ್ಣವಾಗಿ ಮೋಸಗೊಳಿಸಿದ್ದಾರೆ ಎಂದು ಪಲ್ಲವಿ ಪ್ರಶಾಂತ್ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಕ್ಯೂಟ್ ವಿಡಿಯೋ ಹಂಚಿಕೊಂಡ ಮಾಜಿ ಬಿಗ್ಬಾಸ್ ಸ್ಪರ್ಧಿ ರಿಶಾ ಗೌಡ
‘ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಾನು ಗೆದ್ದ ಪ್ರೈಜ್ ಮನಿ ನನ್ನ ಕೈಸೇರಲು ಬಹಳ ಸಮಯ ಹಿಡಿಯಿತು. ಕೆಲವರು ವಿಷಯ ತಿಳಿಯದೆ ನನ್ನನ್ನು ಟೀಕಿಸುತ್ತಿದ್ದಾರೆ. ಹಲವು ದಿನಗಳ ಬಳಿಕ ನನಗೆ ಪ್ರೈಜ್ ಮನಿ ಆಗಿರುವ 35 ಲಕ್ಷ ರೂಪಾಯಿ ಬಂತು. ಅದರಲ್ಲಿ 40 ಶೇಕಡಾ ಜಿಎಸ್ಟಿ ಕಡಿತ ಮಾಡಲಾಗಿತ್ತು. ಕಾರು ಗಿಫ್ಟ್ ಎಂದು ಹೇಳಿದ್ದರು, ಆದರೆ ಅಲ್ಲಿಗೆ ಹೋದಾಗ 8.5 ಲಕ್ಷ ರೂಪಾಯಿಗಳನ್ನು ಪ್ರೈಜ್ ಮನಿಯಲ್ಲಿ ಕಡಿತಗೊಳಿಸಿದರು. ಹಣ ನೀಡಿದರೆ ಮಾತ್ರ ಕಾರು ತೆಗೆದುಕೊಳ್ಳಿ, ಇಲ್ಲದಿದ್ದರೆ ಅದು ಇಲ್ಲೇ ಇರುತ್ತದೆ ಎಂದು ಹೇಳಿದರು. ಕಾರಿಗೆ ಹಣವನ್ನು ಎಲ್ಲಿಂದ ನೀಡಬೇಕು? ಕೊನೆಗೆ ಪ್ರೈಜ್ ಮನಿಯಿಂದಲೇ ಕಡಿತಗೊಳಿಸುತ್ತೇವೆ ಎಂದು ಹೇಳಿದರು’ ಎಂದು ಅವರು ಹೇಳಿದ್ದಾರೆ.
‘ಇನ್ನು ನೆಕ್ಲೇಸ್ ವಿಷಯಕ್ಕೆ ಬಂದರೆ, ಅದು ತಂಡದ ಉಡುಗೊರೆ ಎಂದರು. ಆದರೆ ಅಲ್ಲಿಗೆ ಹೋದ ಮೇಲೆ 5 ಲಕ್ಷ ರೂಪಾಯಿ ಕಟ್ಟಬೇಕೆಂದು ಹೇಳಿದರು. ಗಿಫ್ಟ್ ಟ್ಯಾಕ್ಸ್ ಹೀಗೆಯೇ ಇರುತ್ತದೆ ಎಂದರು. ಅವರು ಹೇಳಿದದಕ್ಕೂ, ನನಗೆ ಸಿಕ್ಕಿದ್ದಕ್ಕೂ ಬಹಳ ವ್ಯತ್ಯಾಸವಿದೆ. ಇದೇನಿದು ಅಣ್ಣಾ ಎಂದು ಕೇಳಿದರೆ, ‘ರೂಲ್ಸ್ ಆರ್ ರೂಲ್ಸ್’ (ನಿಯಮಗಳೇ ನಿಯಮಗಳು) ಎಂದರು’ ಎಂದು ಅವರು ಹೇಳಿಕೊಂಡಿದ್ದಾರೆ. ಪಲ್ಲವಿ ಪ್ರಶಾಂತ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತೆರಿಗೆ ಕಡಿತ ಮಾಡುವುದು ಸರಿ ಇರಬಹುದು, ಆದರೆ ಗಿಫ್ಟ್ ಎಂದು ಹೇಳಿ ಕಾರು ಮತ್ತು ನೆಕ್ಲೇಸ್ಗೆ ಹಣ ಕಟ್ಟಬೇಕೆಂದು ಹೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪಲ್ಲವಿ ಪ್ರಶಾಂತ್ ಅವರ ಈ ಆರೋಪಗಳಿಗೆ ಬಿಗ್ ಬಾಸ್ ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ