ನವದೆಹಲಿ, ಆಗಸ್ಟ್ 16: ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಕೋಲಾಹಲ ಬೆನ್ನಲ್ಲೇ ಇದೀಗ ಯುಜಿಸಿ-ನೆಟ್ 2026ರ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಪತ್ತೆಯಾಗಿದೆ. ಹೀಗಾಗಿ ಮೂರು ವಿಷಯಗಳ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮರು ಪರೀಕ್ಷೆಗೆ ದಿನಾಂಕವನ್ನು ಘೋಷಿಸಿದೆ.
ಮರು ಪರೀಕ್ಷೆಯ ವೇಳಾಪಟ್ಟಿ ಹೀಗಿದೆ
- ಇಂಗ್ಲಿಷ್: ಸೆಪ್ಟೆಂಬರ್ 9 (ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ, ಶಿಫ್ಟ್ 1)
- ವಾಣಿಜ್ಯ (ಕಾಮರ್ಸ್): ಸೆಪ್ಟೆಂಬರ್ 9 (ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ, ಶಿಫ್ಟ್ 2)
- ಸಮಾಜಶಾಸ್ತ್ರ (ಸೋಷಿಯಾಲಜಿ): ಸೆಪ್ಟೆಂಬರ್ 10 (ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ)
ಎನ್ಟಿಎ ಟ್ವೀಟ್
📢 UGC-NET June 2026 | Important Notice
NTA had received several complaints about multiple errors in the papers of English, Commerce and Sociology. NTA formed a committee to enquire into and look into these errors and as per the recommendation of the committee, NTA will… pic.twitter.com/oejnlRSe0c
— National Testing Agency (@NTA_Exams) August 16, 2026
2026ರ ಜೂನ್ನಲ್ಲಿ ಯುಜಿಸಿ-ನೆಟ್ ಪರೀಕ್ಷೆಗಳು ನಡೆದಿದ್ದವು. ಬಳಿಕ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿದ್ದ ಲೋಪದೋಷಗಳ ಬಗ್ಗೆ ಅಭ್ಯರ್ಥಿಗಳಿಂದ ಸಾಲು ಸಾಲು ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಪರಿಶೀಲಿಸಲು ಎನ್ಟಿಎ ನೇಮಿಸಿದ್ದ ತಜ್ಞರ ಸಮಿತಿಯು, ಪ್ರಶ್ನೆಪತ್ರಿಕೆಗಳಲ್ಲಿ ಗಂಭೀರ ವಾಸ್ತವಿಕ ದೋಷಗಳು, ಮುದ್ರಣ ಮತ್ತು ಅನುವಾದ ತಪ್ಪುಗಳು, ಪ್ರಮುಖ ವಿದ್ವಾಂಸರ ಹೆಸರು ಹಾಗೂ ಪುಸ್ತಕಗಳ ಶೀರ್ಷಿಕೆಗಳಲ್ಲಿನ ತಪ್ಪುಗಳು, ವ್ಯಾಕರಣ ದೋಷಗಳು ಮತ್ತು ಹಳೆಯ ಪ್ರಶ್ನೆಗಳ ಪುನರಾವರ್ತನೆಯಂತಹ ಹಲವು ಲೋಪಗಳನ್ನು ಪತ್ತೆ ಮಾಡಿದೆ. ಹೀಗಾಗಿ ಮರು ಪರೀಕ್ಷೆಗೆ ಶಿಫಾರಸು ಮಾಡಿತ್ತು.
ಮರು ಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ
ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಭವಿಷ್ಯಕ್ಕೆ ಯಾವುದೇ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಎನ್ಟಿಎ ಈ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: UGC NET 2026: ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಹತೆ, ಶುಲ್ಕ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ
ಇನ್ನು ಪರೀಕ್ಷಾ ಕೇಂದ್ರ, ನಗರ ಹಾಗೂ ಅಡ್ಮಿಟ್ ಕಾರ್ಡ್ ಕುರಿತ ವಿವರಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಉಳಿದ 84 ವಿಷಯಗಳ ಫಲಿತಾಂಶ ಪ್ರಕ್ರಿಯೆ ಹಾಗೂ ಜೆಆರ್ಎಫ್ ಹಂಚಿಕೆಗೆ ಈ ಮರು ಪರೀಕ್ಷೆಯಿಂದ ಯಾವುದೇ ವಿಳಂಬವಾಗುವುದಿಲ್ಲ ಎಂದು ಎನ್ಟಿಎ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.