ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ಗಳಿಂದ ಗೆದ್ದುಕೊಂಡು ಈ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಈ ಆವೃತ್ತಿಯಲ್ಲಿ ಆರ್ಸಿಬಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸೆಮಿಫೈನಲ್ ಸುತ್ತಿಗೆ ತನ್ನ ಸ್ಥಾನವನ್ನು ಭಾಗಶಃ ಖಚಿತಪಡಿಸಿಕೊಂಡಿದೆ. ಇದು ಮಾತ್ರವಲ್ಲದೆ ಮೊದಲ ನಾಲ್ಕು ಪಂದ್ಯಗಳನ್ನು ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ಇತಿಹಾಸವನ್ನು ನಿರ್ಮಿಸಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 166 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಸ್ಮೃತಿ ಮಂಧಾನ ಸಿಡಿಸಿದ 96 ರನ್ಗಳಿಂದ ಸುಲಭ ಜಯ ದಾಖಲಿಸಿತು.
ಆರ್ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಎರಡು ಓವರ್ಗಳಲ್ಲಿ ಅಂದರೆ ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್ಗಳು ಪತನಗೊಂಡವು. ಡೆಲ್ಲಿಗೆ ಆರಂಭಿಕ ಆಘಾತ ನೀಡಿದ ಲಾರೆನ್ ಬೆಲ್ ಮೊದಲ ಓವರ್ನಲ್ಲೇ ಲಿಜೆಲ್ಲೆ ಲೀ ಹಾಗೂ ಲಾರಾ ವೊಲ್ವಾರ್ಡ್ಟ್ ಅವರನ್ನು ಪೆವಿಲಿಯನ್ಗಟ್ಟಿದರು. ನಂತರದ ಓವರ್ನಲ್ಲಿ ಸಯಾಲಿ ಸತ್ಘರೆ ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್ ಹಾಗೂ ಮರಿಝನ್ನೆ ಕಪ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು.
ಹೀಗಾಗಿ ಡೆಲ್ಲಿ ತಂಡ ಕೇವಲ 10 ರನ್ಗಳಿಗೆ ತನ್ನ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡಿತು. ಆದಾಗ್ಯೂ ಸತತ ವಿಕೆಟ್ಗಳ ಪತನದ ನಡುವೆಯೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ 62 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಲೂಸಿ ಹ್ಯಾಮಿಲ್ಟನ್ ಕೂಡ ಕೆಳಕ್ರಮಾಂಕದಲ್ಲಿ 36 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಆರ್ಸಿಬಿ ಪರ ಲಾರೆನ್ ಬೆಲ್ ಮತ್ತು ಸಯಾಲಿ ಸತ್ಘರೆ ತಲಾ ಮೂರು ವಿಕೆಟ್ ಪಡೆದರೆ, ಪ್ರೇಮಾ ರಾವತ್ ಎರಡು ವಿಕೆಟ್ ಪಡೆದರು. ಇವರ ಜೊತೆಗೆ ನಾಡಿನ್ ಡಿ ಕ್ಲರ್ಕ್ ಒಂದು ವಿಕೆಟ್ ಪಡೆದರು.
Published On – 11:01 pm, Sat, 17 January 26