Asha Bhosle Funeral: ಸರ್ಕಾರಿ ಗೌರವದೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

Asha Bhosle Funeral: ಸರ್ಕಾರಿ ಗೌರವದೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಅನಾರೋಗ್ಯದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ (Asha Bhosle Funeral) ಇಂದು (ಏಪ್ರಿಲ್ 13) ನಡೆದಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಆಶಾ ಭೋಸ್ಲೆ ಅವರ ಅಂತಿಮ ದರ್ಶನ ಪಡೆದರು. ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಅನೇಕರು ಬಂದು ಅಂತಿಮ ನಮನ ಸಲ್ಲಿಸಿದರು. ಸಾವಿರಾರು ಗೀತೆಗಳ ಮೂಲಕ ಎಲ್ಲರ ಮನ ಗೆದ್ದಿದ್ದ ಆಶಾ ಭೋಸ್ಲೆ (Asha Bhosle) ಅವರು ಈಗ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆಶಾ ಭೋಸ್ಲೆ ಅವರು ಏಪ್ರಿಲ್ 12ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದ ಆಶಾ ಭೋಸ್ಲೆ ಅವರು ಸಂಗೀತ ಲೋಕದಲ್ಲಿ ಸಾಧನೆ ಮಾಡಿದ್ದರು. ಅವರ ಅಗಲಿಕೆಗೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಧುರಂಧರ್ 2’ ಸಿನಿಮಾದ ನಟ ರಣವೀರ್ ಸಿಂಗ್ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಕಣ್ಣೀರು ಹಾಕುತ್ತಾ ಅಂತಿಮ ನಮನ ಸಲ್ಲಿಸಿದ ಅವರು ಆಶಾ ಭೋಸ್ಲೆ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆಮಿರ್ ಖಾನ್, ಟಬು, ರಿತೇಶ್ ದೇಶಮುಖ್, ಎ.ಆರ್. ರೆಹಮಾನ್, ಸಚಿನ್ ತೆಂಡೂಲ್ಕರ್, ರಾಕೇಶ್ ರೋಷನ್, ಜಾಕಿ ಶ್ರಾಫ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸುನೇತ್ರಾ ಪವಾರ್ ಮುಂತಾದವರು ಬಂದು ಆಶಾ ಭೋಸ್ಲೆ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಸೋಶಿಯಲ್ ಮೀಡಿಯಾ ಮೂಲಕ ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದವರು ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

80 ವರ್ಷಗಳ ಕಾಲ ಆಶಾ ಭೋಸ್ಲೆ ಅವರು ಗಾಯನದಲ್ಲಿ ಸಕ್ರಿಯರಾಗಿದ್ದರು. ಸಾವಿರಾರು ಗೀತೆಗಳ ಮೂಲಕ ಅವರು ಜನಪ್ರಿಯತೆ ಗಳಿಸಿದ್ದರು. ಹಿಂದಿ ಮಾತ್ರವಲ್ಲದೇ ಹಲವು ಭಾಷೆಗಳ ಗೀತೆಗಳಿಗೆ ಧ್ವನಿ ನೀಡುವ ಮೂಲಕ ಅವರು ಪ್ರಖ್ಯಾತರಾಗಿದ್ದರು. ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ, ‘ಪದ್ಮ ವಿಭೂಷಣ’ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಆಶಾ ಭೋಸ್ಲೆ ಪಾತ್ರರಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *