
ಬೆಂಗಳೂರು, ಮಾರ್ಚ್ 17: ಕರ್ನಾಟಕದಲ್ಲಿ ಯುಗಾದಿಗೂ ಮುನ್ನವೇ ಬೇಸಿಗೆ ಮಳೆ (Rain) ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿದಿದೆ. ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಇತ್ತ ಸಿಲಿಕಾನ್ ಸಿಟಿಗೂ ಮಳೆಯ ಸಿಂಚನವಾಗಿದೆ. ಬೆಂಗಳೂರಿನ ಕೆಂಗೇರಿ ಸುತ್ತುಮುತ್ತ ಜೋರು ಮಳೆ ಸುರಿದಿದ್ದು, ರಿಚ್ಮಂಡ್ ಟೌನ್ ಸುತ್ತಮುತ್ತ ತುಂತುರು ಮಳೆ ಸುರಿದಿದೆ.
ಕಳೆದ ಕೆಲ ದಿನಗಳಿಂದ ನಗರದಲ್ಲಿ ಬಿಸಿಲು ಹೆಚ್ಚಾಗಿ ಉಷ್ಣಾಂಶ ಹೆಚ್ಚಾಗಿತ್ತು. ಬೇಸಿಗೆ ಧಗೆಗೆ ಜನರು ಬೆಂದುಹೋಗಿದ್ದರು. ಹೀಗಾಗಿ ಸೋಮವಾರ ತಡರಾತ್ರಿ ನಗರದ ಹಲವೆಡೆ ತುಂತುರು ಮಳೆ ಆಗಿತ್ತು. ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿತ್ತು.
ಸಂಜೆ ಅಥವಾ ರಾತ್ರಿ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ
ಇನ್ನು ಸುಡುಬೇಸಿಗೆ ನಡುವೆ ಮೊದಲ ಮಳೆ ಖುಷಿ ಜೊತೆ ಕೆಲವೆಡೆ ರೈತರಿಗೆ ಆತಂಕತಂದಿದೆ. ಹವಾಮಾನ ಇಲಾಖೆ ಇನ್ನೂ ಮೂರ್ನಾಲ್ಕು ದಿನ ಮಳೆಯ ಮುನ್ಸೂಚನೆ ನೀಡಿದೆ. ಇತ್ತ ಬೆಂಗಳೂರಿನ ಹಲವೆಡೆ ಮೋಡಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಗೆ ಉಪ ನಿರ್ದೇಶಕರ ಕಚೇರಿಗೆ ನುಗಿದ ನೀರು
ಇಂದು ರಾಜ್ಯ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಳಗಾವಿ ನಗರದಲ್ಲಿ ಭಾರೀ ಮಳೆ ಆಗಿದ್ದು, ರಾಮತೀರ್ಥ ನಗರದಲ್ಲಿರುವ ಮಳೆಯಿಂದ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿಗೆ ನೀರು ನುಗ್ಗಿದೆ. ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ಗಳು ಭಾಗಶಃ ಮುಳುಗಡೆ ಆಗಿದೆ. ಕಚೇರಿಗೆ ಚರಂಡಿ ನೀರು ನುಗಿದ್ದು, ಕಚೇರಿಯಿಂದ ಹೊರ ಬಾರದೆ ನೌಕರರು ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರಿನ ಶ್ರೀಕಾಂತ ಸುಂಕದವರ ಹೊಲದಲ್ಲಿ ಆಲಿಕಲ್ಲು ಮಳೆ ಆಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ, ಈ ಭಾಗದಲ್ಲಿ ಮಾತ್ರ ಬಿಸಿಗಾಳಿ
ಇತ್ತ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೂಡ ವರುಣ ತಂಪೆರೆದಿದ್ದಾನೆ. ಗುಡುಗು ಸಹಿತ ಮಳೆ ಆರ್ಭಟಿಸಿದ್ದು, ಬೇಸಿಗೆ ಬಿಸಿಲಿನಿಂದ ಬಸವಳದಿದ್ದ ಜನರು ಮತ್ತು ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದ ವಾಹನ ಸವಾರರು ಪರದಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.