Bank Job: ಬ್ಯಾಂಕ್ ಉದ್ಯೋಗ ಪಡೆಯಲು ಇನ್ಮುಂದೆ ಪರೀಕ್ಷೆಯ ಜೊತೆಗೆ ‘ಸಿಬಿಲ್ ಸ್ಕೋರ್’ ಕೂಡ ಮುಖ್ಯ!

Bank Job: ಬ್ಯಾಂಕ್ ಉದ್ಯೋಗ ಪಡೆಯಲು ಇನ್ಮುಂದೆ ಪರೀಕ್ಷೆಯ ಜೊತೆಗೆ ‘ಸಿಬಿಲ್ ಸ್ಕೋರ್’ ಕೂಡ ಮುಖ್ಯ!

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಬ್ಯಾಂಕಿನಲ್ಲಿ ಕೆಲಸ ಪಡೆಯುವುದು ಸುಲಭದ ಮಾತಲ್ಲ. ಇದುವರೆಗೆ ಅಭ್ಯರ್ಥಿಗಳು ಕೇವಲ ಕಠಿಣ ಅಧ್ಯಯನ, ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಈಗ ಬ್ಯಾಂಕಿಂಗ್ ವಲಯವು ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್ (CIBIL Score) ಅನ್ನು ಪರಿಶೀಲಿಸುವುದು ಈಗ ಕಡ್ಡಾಯವಾಗಿದೆ.

ಹಣಕಾಸಿನ ಶಿಸ್ತಿಗೆ ಆದ್ಯತೆ:

ಸಾರ್ವಜನಿಕರ ಹಣ ಮತ್ತು ಬ್ಯಾಂಕಿನ ಆರ್ಥಿಕ ವಹಿವಾಟುಗಳನ್ನು ನಿರ್ವಹಿಸುವ ಜವಾಬ್ದಾರಿಯುತ ಸ್ಥಾನಕ್ಕೆ ಬರುವವರು ಸ್ವಚ್ಛವಾದ ಹಣಕಾಸಿನ ದಾಖಲೆಯನ್ನು ಹೊಂದಿರಬೇಕು ಎಂಬುದು ಬ್ಯಾಂಕುಗಳ ಆಶಯವಾಗಿದೆ. ಒಬ್ಬ ಅಭ್ಯರ್ಥಿಯು ಈ ಹಿಂದೆ ಪಡೆದ ಸಾಲವನ್ನು ಮರುಪಾವತಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ, ಅಂತಹವರ ವಿಶ್ವಾಸಾರ್ಹತೆಯ ಮೇಲೆ ಬ್ಯಾಂಕುಗಳು ಸಂಶಯ ವ್ಯಕ್ತಪಡಿಸುತ್ತವೆ. ಕಳಪೆ ಸಾಲದ ದಾಖಲೆ ಹೊಂದಿರುವವರಿಗೆ ಕೆಲಸ ನೀಡುವುದು ಬ್ಯಾಂಕಿನ ದೃಷ್ಟಿಯಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಯಾರ ಮೇಲೆ ಈ ನಿಯಮದ ಪರಿಣಾಮ?

ಈ ಹೊಸ ಬದಲಾವಣೆಯು ಬ್ಯಾಂಕಿಂಗ್ ಪರೀಕ್ಷೆಗಳ ಮೂಲಕ ಉದ್ಯೋಗ ಪಡೆಯಲು ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ. ವಿಶೇಷವಾಗಿ ಈ ಹಿಂದೆ ಸಾಲ ಪಡೆದು ಇಎಂಐ (EMI) ಪಾವತಿಸದವರು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಉಳಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕಬಹುದು. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಸಿಬಿಲ್ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಥವಾ ತೃಪ್ತಿದಾಯಕ ವಿವರಣೆ ನೀಡಲು ವಿಫಲರಾದಲ್ಲಿ, ಅಂತಿಮವಾಗಿ ಆಯ್ಕೆಯಾಗಿದ್ದರೂ ಸಹ ಉದ್ಯೋಗದ ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಉದ್ಯೋಗವಕಾಶ; ಪದವೀಧರರಿಗೆ ಸುವರ್ಣವಕಾಶ

ಶಿಕ್ಷಣ ಸಾಲ ಪಡೆದವರಿಗೆ ವಿನಾಯಿತಿ:

ಆದರೆ, ಶಿಕ್ಷಣಕ್ಕಾಗಿ ಸಾಲ (Education Loan) ಪಡೆದ ವಿದ್ಯಾರ್ಥಿಗಳಿಗೆ ಬ್ಯಾಂಕುಗಳು ಸ್ವಲ್ಪ ಮಟ್ಟಿನ ರಿಯಾಯಿತಿಯನ್ನು ನೀಡಿವೆ. ಕೇವಲ ಹಣಕಾಸಿನ ಅಡಚಣೆಯಿಂದಾಗಿ ಶಿಕ್ಷಣ ಸಾಲದ ಮರುಪಾವತಿ ವಿಳಂಬವಾಗಿದ್ದರೆ ಮತ್ತು ಅಭ್ಯರ್ಥಿಯು ಉದ್ದೇಶಪೂರ್ವಕವಾಗಿ ಸಾಲಗಾರನಾಗಿ ಉಳಿದಿಲ್ಲದಿದ್ದರೆ, ಅಂತಹ ಸಂದರ್ಭಗಳನ್ನು ಮಾನವೀಯ ನೆಲೆಯಲ್ಲಿ ಪರಿಶೀಲಿಸಲಾಗುತ್ತದೆ. ಶಿಕ್ಷಣ ಸಾಲದ ವಿಷಯದಲ್ಲಿ ಬ್ಯಾಂಕುಗಳು ಮೃದು ಧೋರಣೆ ತಳೆಯುವುದಾಗಿ ತಿಳಿಸಿವೆ.

ಅಭ್ಯರ್ಥಿಗಳಿಗೆ ತಜ್ಞರ ಕಿವಿಮಾತು:

ಬ್ಯಾಂಕಿಂಗ್ ವಲಯದ ಉದ್ಯೋಗಾಕಾಂಕ್ಷಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ತಮ್ಮ ಹಣಕಾಸಿನ ಶಿಸ್ತಿನ ಬಗ್ಗೆಯೂ ಜಾಗರೂಕರಾಗಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಭ್ಯರ್ಥಿಗಳು ನಿಯಮಿತವಾಗಿ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಹಳೆಯ ಸಾಲದ ಬಾಕಿಗಳಿದ್ದರೆ ತಕ್ಷಣ ಪಾವತಿಸಿ ಬ್ಯಾಂಕಿನಿಂದ ‘ಬಾಕಿ ಇಲ್ಲದ ಪ್ರಮಾಣಪತ್ರ’ (NOC) ಪಡೆಯುವುದು ಸೂಕ್ತ. ಇದರಿಂದ ಭವಿಷ್ಯದಲ್ಲಿ ಉದ್ಯೋಗದ ಹಂತದಲ್ಲಿ ಎದುರಾಗಬಹುದಾದ ತಾಂತ್ರಿಕ ಅಡೆತಡೆಗಳನ್ನು ತಪ್ಪಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *