
ಟೀಂ ಇಂಡಿಯಾದ ಮಾಜಿ ನಾಯಕ, ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಆಟಗಾರನಾಗಿ ಆ ಬಳಿಕ ತಂಡದ ನಾಯಕನಾಗಿ ತಂಡವನ್ನು ಅನೇಕ ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದ ರಾಹುಲ್ ದ್ರಾವಿಡ್, ನಿವೃತ್ತಿಯ ಬಳಿಕ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ದ್ರಾವಿಡ್ ಅವರ ಕೋಚಿಂಗ್ನಡಿಯಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಅವರ ಕೋಚಿಂಗ್ನಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು, ಪ್ರಸ್ತುತ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಹೀಗೆ ತನ್ನ ನಿಸ್ವಾರ್ಥ ಸೇವೆಯಿಂದ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿರುವ ದ್ರಾವಿಡ್ಗೆ ಮಾರ್ಚ್ 15 ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ನಮನ್ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಗೌರವಕ್ಕೆ ಭಾಜನರಾಗಲಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿರುವಂತೆ ರಾಹುಲ್ ದ್ರಾವಿಡ್ ಅವರಿಗೆ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಟೀಂ ಇಂಡಿಯಾದ ‘ಬಿಗ್ ಫೋರ್’ ಬ್ಯಾಟಿಂಗ್ ಲೈನ್ ಅಪ್ನ ಭಾಗವಾಗಿದ್ದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ತಂತಹ ದಿಗ್ಗಜರ ಪಟ್ಟಿಯಲ್ಲಿ ಒಬ್ಬರಾಗಿದ್ದರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ದ್ರಾವಿಡ್ಗೆ ‘ದಿ ವಾಲ್’ ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ.
ಏಕದಿನ ಮಾದರಿಯಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ (13,288) ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2012 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ದ್ರಾವಿಡ್, ಆ ಬಳಿಕ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡರು. ನಂತರ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ದ್ರಾವಿಡ್, ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.