ವೃತ್ತಿ ಜೀವನದಲ್ಲಿ ಯಶಸ್ಸಿನ (success) ಮೆಟ್ಟಿಲೇರಬೇಕು ಎಂಬ ಕನಸ್ಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವೊಮ್ಮೆ, ಕಠಿಣ ಪರಿಶ್ರಮದ ಹೊರತಾಗಿಯೂ, ಅರ್ಹವಾದ ಗೌರವ ಮತ್ತು ಪ್ರಗತಿ ಸಿಗುವುದಿಲ್ಲ. ಯಶಸ್ಸು ಸಾಧಿಸಲು, ಕೆಲಸದ ಸ್ಥಳದಲ್ಲಿ ಗೌರವ ಗಳಿಸಲು ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ, ನಿಮ್ಮ ಬುದ್ಧಿವಂತಿಕೆ ಮತ್ತು ಒಂದಷ್ಟು ನಡವಳಿಕೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ಆಚಾರ್ಯ ಚಾಣಕ್ಯರು ಶತಮಾನಗಳ ಹಿಂದೆಯೇ ತಿಳಿಸಿಕೊಟ್ಟಿದ್ದಾರೆ. ನೀವು ಸಹ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ಬಯಸಿದರೆ ಚಾಣಕ್ಯರ ಈ ಕೆಲವು ರಹಸ್ಯ ಮಂತ್ರಗಳನ್ನು ತಪ್ಪದೆ ಪಾಲಿಸಿ.
ಕೆಲಸದ ಸ್ಥಳದಲ್ಲಿ ಗೌರವ ಗಳಿಸಲು ಪಾಲಿಸಬೇಕಾದ ತತ್ವಗಳು:
ನಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ: ಆಚಾರ್ಯ ಚಾಣಕ್ಯ ಹೇಳುವಂತೆ, ಒಬ್ಬ ವ್ಯಕ್ತಿಯು ತನ್ನ ದೌರ್ಬಲ್ಯಗಳನ್ನು ಎಂದಿಗೂ ಇತರರಿಗೆ ಬಹಿರಂಗಪಡಿಸಬಾರದು. ನೀವು ಕಚೇರಿಯಲ್ಲಿ ನಿಮ್ಮ ನ್ಯೂನತೆಗಳನ್ನು ಬಹಿರಂಗವಾಗಿ ಹೇಳಿದರೆ, ನಿಮ್ಮ ವಿರೋಧಿಗಳು ಅವುಗಳನ್ನು ಬಳಸಿಕೊಳ್ಳಬಹುದು. ಹಾಗಾಗಿ ನಿಮ್ಮ ದೌರ್ಬಲ್ಯಗಳ ಬಗ್ಗೆ ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಹಂಚಿಕೊಳ್ಳಬೇಡಿ. ಬದಲಿಗೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯಗಳನ್ನು ನಂಬಿರಿ.
ಇತರರ ತಪ್ಪುಗಳಿಂದ ಕಲಿಯಿರಿ: ಆಚಾರ್ಯ ಚಾಣಕ್ಯರು ಹೇಳುವಂತೆ ಬುದ್ಧಿವಂತ ವ್ಯಕ್ತಿ ಎಂದರೆ ಆತ ಇತರರ ತಪ್ಪುಗಳಿಂದ ಕಲಿಯುವವನು. ಕಚೇರಿ ವಾತಾವರಣವನ್ನು ಅರ್ಥಮಾಡಿಕೊಳ್ಳಿ, ಇತರರು ವಿಫಲರಾದಾಗ ಅದಕ್ಕೆ ಕಾರಣಗಳೇನು ಎಂಬುದನ್ನು ಗಮನಿಸಿ ಮತ್ತು ಅದೇ ತಪ್ಪುಗಳನ್ನು ನೀವು ಪುನರಾವರ್ತಿಸುವುದನ್ನು ತಪ್ಪಿಸಿ.
ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಿ: ನಿಮ್ಮ ಕೆಲಸ ಅಥವಾ ಯೋಜನೆ ಪೂರ್ಣಗೊಳ್ಳುವವರೆಗೆ ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಲೇಬೇಕೆಂದರೆ ನಿಮ್ಮ ಮುಂದಿನ ಹೆಜ್ಜೆಗಳನ್ನು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಹಂಚಿಕೊಳ್ಳಿ.
ಶಿಸ್ತು ಮತ್ತು ಸಮಯಕ್ಕೆ ಗೌರವ: ಸಮಯವನ್ನು ಗೌರವಿಸದವರಿಗೆ ಯಶಸ್ಸು ಸಿಗುವುದಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣ ಗೊಳಿಸುವುದು, ಇದು ನಿಮಗೆ ವೃತ್ತಿಪರ ಇಮೇಜ್ ನೀಡುತ್ತದೆ. ಅಷ್ಟೇ ಅಲ್ಲದೆ ಇದು ನಿಮಗೆ ಕೆಲಸದ ಸ್ಥಳದಲ್ಲಿ ಯಶಸ್ಸು ಮತ್ತು ಗೌರವವನ್ನು ತಂದುಕೊಡುತ್ತದೆ.
ಇದನ್ನೂ ಓದಿ: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು
ಕೆಲಸ ಪ್ರಾರಂಭಿಸುವ ಮೊದಲು ನಿಮ್ಮನ್ನು ನೀವು ಕೇಳಬೇಕಾದ 3 ಪ್ರಶ್ನೆಗಳು:
ಚಾಣಕ್ಯನ ಪ್ರಕಾರ, ಯಾವುದೇ ದೊಡ್ಡ ಯೋಜನೆ ಅಥವಾ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು, ನಿಮ್ಮನ್ನು ನೀವು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ.
- ನಾನು ಈ ಕೆಲಸ ಏಕೆ ಮಾಡುತ್ತಿದ್ದೇನೆ?
- ಇದರ ಫಲಿತಾಂಶ ಏನಾಗುತ್ತದೆ?
- ನಾನು ಇದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆಯೇ?
ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ನಿಮ್ಮಲ್ಲಿ ಇದ್ದಾಗ ಮಾತ್ರ ನೀವು ಮುಂದುವರಿಯಬೇಕು. ಈ ಸ್ಪಷ್ಟತೆಯು ನಿಮ್ಮನ್ನು ಕಚೇರಿಯಲ್ಲಿ ಹೆಚ್ಚು ಗಂಭೀರವಾಗಿ ಮತ್ತು ಸಂಯಮದಿಂದ ಕಾಣುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ