
2012 ರಲ್ಲಿ ಸಿಎಸ್ಕೆ ತಂಡವನ್ನು ಸೇರಿ ಈ ತಂಡದ ಪರ ಬರೋಬ್ಬರಿ 12 ಆವೃತ್ತಿಗಳನ್ನು ಆಡಿದ್ದ ರವೀಂದ್ರ ಜಡೇಜಾ, ಈ ಆವೃತ್ತಿಯಲ್ಲಿ ತನ್ನ ಮಾತೃ ತಂಡ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ವಾಸ್ತವವಾಗಿ ಈ ವರ್ಷ ನಡೆದ ಮಿನಿ ಹರಾಜಿಗೂ ಮುನ್ನ ಸಿಎಸ್ಕೆ ತಂಡ, ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಟ್ರೇಡ್ ಮಾಡಿಕೊಂಡಿತ್ತು. ಜಡೇಜಾ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.
ಈ ರೀತಿ ಟ್ರೇಡ್ ಮೂಲಕ ರಾಜಸ್ಥಾನ್ ತಂಡವನ್ನು ಸೇರಿಕೊಂಡಿದ್ದ ಜಡೇಜಾ, ಈ ಲೀಗ್ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಂಡವನ್ನು ಮೂರು ಬಾರಿ ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದ ತನ್ನನ್ನು ಕೈಬಿಟ್ಟ ಸಿಎಸ್ಕೆ ವಿರುದ್ಧ ಸೇಡು ತೀರಿಸಿಕೊಂಡಿರುವ ಜಡೇಜಾ, ಸಿಎಸ್ಕೆ ವಿರುದ್ಧ ಆಡಿದ ಮೊದಲ ಪಂದ್ಯದ ಮೊದಲ ಓವರ್ನಲ್ಲೇ ಎರಡು ಪ್ರಮುಖ ವಿಕೆಟ್ಗಳನ್ನು ಉರುಳಿಸಿ ಸರಿಯಾದ ತಿರುಗೇಟು ನೀಡಿದ್ದಾರೆ.
ಸಿಎಸ್ಕೆ ಇನ್ನಿಂಗ್ಸ್ನ 8ನೇ ಓವರ್ ಬೌಲ್ ಮಾಡಲು ಬಂದ ಜಡೇಜಾ, ಈ ಓವರ್ನ ಎರಡನೇ ಎಸೆತದಲ್ಲಿ ಸರ್ಫರಾಜ್ ಖಾನ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಸರ್ಫರಾಜ್ ವಿಕೆಟ್ ಪತನದ ಬಳಿಕ ಬಂದ ಶಿವಂ ದುಬೆ ಬಂದ ಕೂಡಲೇ ಜಡೇಜಾ ಅವರ ಎಸೆತವನ್ನು ಸಿಕ್ಸರ್ಗಟ್ಟಿದರು. ಮತ್ತದೇ ಸಿಕ್ಸರ್ಗೆ ಕೈ ಹಾಕಿದ ದುಬೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಜಡೇಜಾ ತಾವು ಬೌಲ್ ಮಾಡಿದ ಮೊದಲ ಓವರ್ನಲ್ಲೇ ಪ್ರಮುಖ 2 ವಿಕೆಟ್ಗಳನ್ನು ಉರುಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ