ಬೆಂಗಳೂರು, ಫೆಬ್ರವರಿ 28: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅತೀರಥ ಮಹಾರಥರು ಅಂದರೆ ಯಾರು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ನಿತ್ಯ ಜೀವನದಲ್ಲಿ ನಾವು ಬಳಸುವ ಮಾತುಗಳು ಕೆಲವೊಮ್ಮೆ ವ್ಯಂಗ್ಯದಿಂದ ಅಥವಾ ಹೊಗಳಿಕೆಯಿಂದ ಕೂಡಿರುತ್ತವೆ. ಅತಿರಥ ಮಹಾರಥ ಎಂಬ ಪದಗಳೂ ಇವುಗಳಲ್ಲಿ ಸೇರಿವೆ. ಆದರೆ, ಈ ಪದಗಳ ಆಳವಾದ ಮತ್ತು ನಿಜವಾದ ಅರ್ಥವನ್ನು ಅನೇಕರು ತಿಳಿದಿಲ್ಲ. ಇವು ಕೇವಲ ಆಡುಭಾಷೆಯ ಭಾಗವಾಗಿರದೆ, ಪ್ರಾಚೀನ ಇತಿಹಾಸ ಮತ್ತು ಪುರಾಣಗಳಲ್ಲಿ ಯುದ್ಧದಲ್ಲಿ ಯೋಧರ ಸಾಮರ್ಥ್ಯವನ್ನು ವಿವರಿಸಲು ಬಳಸಲಾಗುವ ಪ್ರಮುಖ ಶ್ರೇಣಿಗಳಾಗಿವೆ.
ಕುರುಕ್ಷೇತ್ರ ಯುದ್ಧ, ರಾಮಾಯಣದಂತಹ ಮಹಾಕಾವ್ಯಗಳಲ್ಲಿ ಈ ಪದಗಳು ಪ್ರಮುಖ ಪಾತ್ರ ವಹಿಸುತ್ತವೆ. ಯೋಧನೊಬ್ಬ ಏಕಕಾಲದಲ್ಲಿ ಎಷ್ಟು ಜನರೊಂದಿಗೆ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದರ ಆಧಾರದ ಮೇಲೆ ಈ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ. ಈ ಶ್ರೇಣಿಗಳು ರಥ, ಅತಿರಥ, ಮಹಾರಥ, ಅತಿಮಹಾರಥ ಮತ್ತು ಮಹಾಮಹಾರಥ ಎಂದು ಐದು ವಿಭಾಗಗಳನ್ನು ಒಳಗೊಂಡಿವೆ. ಇವು ಕೇವಲ ಪದಗಳಲ್ಲ, ಬದಲಿಗೆ ಮಹಾ ವ್ಯಕ್ತಿಗಳ ಅಗಾಧ ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕಗಳಾಗಿವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.