
ಐಪಿಎಲ್ 19 ನೇ ಸೀಸನ್ನ ಮೊದಲ ಡಬಲ್ ಹೆಡರ್ನ ಮೊದಲ ಮತ್ತು ಎಂಟನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ದೆಹಲಿಯ ತವರು ಮೈದಾನದಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಸೀಸನ್ನಲ್ಲಿ ಎರಡೂ ತಂಡಗಳ ಎರಡನೇ ಪಂದ್ಯ ಇದಾಗಿದೆ. ಎರಡೂ ತಂಡಗಳು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಿವೆ. ಆದ್ದರಿಂದ, ಎರಡೂ ತಂಡಗಳು ಈ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿವೆ.
ಟಾಸ್ ಗೆದ್ದ ಡೆಲ್ಲಿ
ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಹೀಗಾಗಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಬಳಿಕ ಮಾತನಾಡಿದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದರು. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇನ್ನು ಮುಂಬೈ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದ ಕಾರಣ ಈ ಪಂದ್ಯವನ್ನು ಆಡುತ್ತಿಲ್ಲ. ಅವರ ಬದಲಿಗೆ ದೀಪಕ್ ಚಾಹರ್ ಆಡುತ್ತಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಬದಲಿಗೆ ಕಾರ್ಬಿನ್ ಬಾಷ್ ಆಡುತ್ತಿದ್ದರೆ, ಗಜಾನಫರ್ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಆಡುತ್ತಿದ್ದಾರೆ.
ಮುಂಬೈ-ಡೆಲ್ಲಿ ಮುಖಾಮುಖಿ ದಾಖಲೆ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 21 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡವನ್ನು ಮಣಿಸಿದೆ. ಹೀಗಾಗಿ ಗೆದ್ದ ತಂಡಗಳ ನಡುವಿನ ಕಾಳಗ ತೀವ್ರ ಕುತೂಹಲ ಕೆರಳಿಸಿದೆ.
ಉಭಯ ತಂಡಗಳ ಪ್ಲೇಯಿಂಗ್ 11
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ (ನಾಯಕ), ನಮನ್ ಧೀರ್, ಶೆರ್ಫಾನೆ ರುದರ್‌ಫೋರ್ಡ್, ಶಾರ್ದೂಲ್ ಠಾಕೂರ್, ದೀಪಕ ಚಾಹರ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ಕಾರ್ಬಿನ್ ಬಾಷ್.
ಡೆಲ್ಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ವಿಪ್ರಜ್ ನಿಗಮ್, ಕುಲ್ದೀಪ್ ಯಾದವ್, ಲುಂಗಿ ಎನ್‌ಗಿಡಿ, ಮುಖೇಶ್ ಕುಮಾರ್, ಟಿ ನಟರಾಜನ್.