Headlines

ENG vs ITA: ಇಟಲಿ ವಿರುದ್ಧ ಇಂಗ್ಲೆಂಡ್​ಗೆ ಪ್ರಯಾಸದ ಗೆಲುವು; ಸೂಪರ್​ 8 ಸುತ್ತಿಗೆ ಎಂಟ್ರಿ – Kannada News | T20 World Cup 2026: England Edges Spirited Italy in Thriller; Jacks Shines

2026 ರ ಟಿ20 ವಿಶ್ವಕಪ್ ದಿನ ಕಳೆದಂತೆ ರೋಚಕ ಘಟ್ಟದತ್ತ ಸಾಗುತ್ತಿದೆ. ಈ ಆವೃತ್ತಿಯಲ್ಲಿ ಕೆಲವು ಬಲಿಷ್ಠ ತಂಡಗಳು ನಿರಸ ಪ್ರದರ್ಶನ ನೀಡುತ್ತಿದ್ದರೆ, ಕೆಲವು ದುರ್ಬಲ ತಂಡಗಳು ಗಮನಾರ್ಹ ಪ್ರದರ್ಶನ ನೀಡುತ್ತಿವೆ. ಕಳಪೆ ಪ್ರದರ್ಶನ ನೀಡುತ್ತಿರುವ ಬಲಿಷ್ಠ ತಂಡಗಳ ಪೈಕಿ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್‌ ಕೂಡ ಸೇರಿದೆ. ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್‌, ಈ ಮೂರು ಪಂದ್ಯಗಳನ್ನು ಕೂದಲೆಳೆ ಅಂತರದಿಂದ ಗೆದ್ದುಕೊಂಡು ಸೋಲಿನಿಂದ ಪಾರಾಗಿದ್ದು ಮಾತ್ರವಲ್ಲದೆ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಇಂದು ನಡೆದ ಇಟಲಿ ವಿರುದ್ಧದ ಪಂದ್ಯದಲ್ಲೂ ಇಂಗ್ಲೆಂಡ್​ಗೆ ಏಕಪಕ್ಷೀಯವಾಗಿ ಗೆಲುವು ದಕ್ಕಲಿಲ್ಲ. ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ ಇಟಲಿ ಕೂಡ ಇಂಗ್ಲೆಂಡ್ ವಿರುದ್ಧ ಕೆಚ್ಚೆದೆಯ ಹೋರಾಟ ನೀಡಿತಾದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.

ಮತ್ತೆ ಎಡವಿದ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿಯೂ ಇಂಗ್ಲೆಂಡ್ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ಪರ ಫಿಲ್ ಸಾಲ್ಟ್ ತಂಡಕ್ಕೆ ತ್ವರಿತ ಆರಂಭ ನೀಡಿದರು, ಅವರು ಬಂದ ತಕ್ಷಣ ಕೆಲವು ಬೌಂಡರಿಗಳನ್ನು ಬಾರಿಸಿದರು. ಆದರೆ ಜೋಸ್ ಬಟ್ಲರ್ ಅವರ ಕಳಪೆ ಫಾರ್ಮ್ ಈ ಪಂದ್ಯದಲ್ಲೂ ಮುಂದುವರೆಯಿತು. ಆದಾಗ್ಯೂ, ಸಾಲ್ಟ್ ಔಟಾದ ನಂತರ, ಇಂಗ್ಲೆಂಡ್‌ನ ವಿಕೆಟ್‌ಗಳು ಒಂದೊಂದಾಗಿ ಬೀಳಲು ಪ್ರಾರಂಭಿಸಿದವು. ಇದರ ಪರಿಣಾಮವಾಗಿ ಕೇವಲ 105 ರನ್‌ಗಳಿಗೆ ನಾಯಕ ಹ್ಯಾರಿ ಬ್ರೂಕ್ ಸೇರಿದಂತೆ ತಂಡದ ಅರ್ಧದಷ್ಟು ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು.

ಈ ವೇಳೆ ಜೊತೆಯಾದ ಸ್ಯಾಮ್ ಕರನ್ ಮತ್ತು ವಿಲ್ ಜ್ಯಾಕ್ಸ್ ತಂಡದ ಇನ್ನಿಂಗ್ಸ್ ನಿಭಾಯಿಸಿ, ತಂಡವನ್ನು 150 ರನ್​ಗಳ ಗಡಿ ದಾಟಿಸಿದರು. ಕರನ್ ಔಟಾದ ನಂತರವೂ ಅದ್ಭುತ ಫಾರ್ಮ್ ಮುಂದುವರೆಸಿದ ವಿಲ್ ಜ್ಯಾಕ್ಸ್, ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡವನ್ನು 202 ರನ್​ಗಳಿಗೆ ಕೊಂಡೊಯ್ದರು. ಇಟಲಿ ಪರ ಗ್ರಾಂಟ್ ಸ್ಟೀವರ್ಟ್ ಮತ್ತು ಕ್ರಿಶನ್ ಕಲುಗಮಗೆ ತಲಾ ಎರಡು ವಿಕೆಟ್ ಪಡೆದರು.

ಇಟಲಿಗೆ ಆರಂಭಿಕ ಆಘಾತ

ಈ ಗುರಿ ಬೆನ್ನಟ್ಟಿದ ಇಟಲಿಗೆ ಜೋಫ್ರಾ ಆರ್ಚರ್ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ ಕಬಳಿಸಿ ಆಘಾತ ನೀಡಿದರು. ನಂತರ ಕೇವಲ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್‌ಗಳು ಬಿದ್ದವು. ಆದರೆ ಆ ಬಳಿಕ ಜೊತೆಯಾದ ಜಸ್ಟಿನ್ ಮೊಸ್ಕಾ ಮತ್ತು ಬೆನ್ ಮಾನೆಂಟಿ ಇಂಗ್ಲಿಷ್ ಬೌಲರ್‌ಗಳ ಬೆವರಿಳಿಸಿ 92 ರನ್‌ಗಳ ಸ್ಫೋಟಕ ಪಾಲುದಾರಿಕೆಯನ್ನು ರೂಪಿಸಿದರು. ಮಾನೆಂಟಿ ಕೇವಲ 22 ಎಸೆತಗಳಲ್ಲಿ ಇಟಲಿ ಪರ ವೇಗದ ಅರ್ಧಶತಕವನ್ನು ಬಾರಿಸಿದರು. ವಿಲ್ ಜ್ಯಾಕ್ಸ್ ಅಂತಿಮವಾಗಿ ಮಾನೆಂಟಿಯನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು.

ಹೋರಾಟ ಬಿಡದ ಇಟಲಿ

ಸ್ವಲ್ಪ ಸಮಯದ ನಂತರ ಮೊಸ್ಕಾ ಕೂಡ ಆದಿಲ್ ರಶೀದ್‌ಗೆ ಬಲಿಯಾದರು. 16 ನೇ ಓವರ್‌ನಲ್ಲಿ ಸತತ ಎರಡು ವಿಕೆಟ್‌ಗಳನ್ನು ಕಬಳಿಸಿದ ಸ್ಯಾಮ್ ಕರನ್ ಇಟಲಿ ವೇಗಕ್ಕೆ ಬ್ರೇಕ್ ಹಾಕಿದರು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ. ಈ ವೇಳೆ ಬ್ಯಾಟಿಂಗ್​ಗೆ ಬಂದ ಗ್ರಾಂಟ್ ಸ್ಟೀವರ್ಟ್ ಸಿಕ್ಸರ್‌ಗಳ ಸುರಿಮಳೆಗೈದರು. ಜೋಫ್ರಾ ಆರ್ಚರ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು 18 ನೇ ಓವರ್‌ನಲ್ಲಿ ಆದಿಲ್ ರಶೀದ್ ಅವರ ಓವರ್​ನಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಹೀಗಾಗಿ ಕೊನೆಯ ಎರಡು ಓವರ್‌ಗಳಲ್ಲಿ ಇಟಲಿ ಗೆಲುವಿಗೆ 30 ರನ್‌ ಬೇಕಿದ್ದವು. ಆದರೆ ಈ ವೇಳೆ ದಾಳಿಗಿಳಿದ ಕರನ್ 19ನೇ ಓವರ್‌ನಲ್ಲಿ ಕೇವಲ ಐದು ರನ್‌ಗಳನ್ನು ಬಿಟ್ಟುಕೊಟ್ಟು ಸ್ಟೀವರ್ಟ್ ಅವರ ವಿಕೆಟ್ ಪಡೆದರು. ಅಂತಿಮವಾಗಿ ಇಟಲಿ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು

Source link

Leave a Reply

Your email address will not be published. Required fields are marked *