T20 World Cup 2026: ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ಗೆ ಸೋಲುಣಿಸಿ ಟೀಮ್ ಇಂಡಿಯಾ ಫೈನಲ್ಗೇರಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ರಣರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 253 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 246 ರನ್ಗಳಿಸಿ 7 ರನ್ಗಳಿಂದ ಸೋಲೊಪ್ಪಿಕೊಂಡಿತು.
ಅಂದರೆ ಇಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಸೋಲಿನ ಅಂತರ ಕೇವಲ 7 ರನ್ಗಳು ಮಾತ್ರ. ಈ ಅಂತರ ಸೃಷ್ಟಿಯಾಗಿದ್ದು ಹೇಗೆ? ಈ ಗೆಲುವಿಗೆ ಕಾರಣಕರ್ತರು ಯಾರೆಂದು ನೋಡುವುದಾದರೆ….
- ಸಂಜು ಸ್ಯಾಮ್ಸನ್ ಅಬ್ಬರ: ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಬಂದ ಸಂಜು ಸ್ಯಾಮ್ಸನ್ ಕೇವಲ 42 ಎಸೆತಗಳಲ್ಲಿ 89 ರನ್ (7 ಸಿಕ್ಸರ್, 8 ಬೌಂಡರಿ) ಸಿಡಿಸಿ ಭಾರತಕ್ಕೆ ಬೃಹತ್ ಮೊತ್ತದ ಅಡಿಪಾಯ ಹಾಕಿಕೊಟ್ಟಿದ್ದರು. ಈ ಒಂದು ಭರ್ಜರಿ ಇನಿಂಗ್ಸ್ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಕಾರಣವಾಯಿತು.
- ತಿಲಕ್ ವರ್ಮಾ 3 ಸಿಕ್ಸ್: ಟೀಮ್ ಇಂಡಿಯಾ ಪರ ಎಲ್ಲಾ ಬ್ಯಾಟರ್ಗಳು ಅಬ್ಬರಿಸಿದರೂ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ತಿಲಕ್ ವರ್ಮಾ ಅವರ ಮೂರು ಸಿಕ್ಸ್. ಏಕೆಂದರೆ 18ನೇ ಓವರ್ನ ಮುಕ್ತಾಯದ ವೇಳೆಗೆ ಕ್ರೀಸ್ಗೆ ಆಗಮಿಸಿದ ತಿಲಕ್ ವರ್ಮಾ ಜೋಫ್ರಾ ಅರ್ಚರ್ ಎಸೆದ 19ನೇ ಓವರ್ನಲ್ಲಿ 3 ಸಿಕ್ಸ್ ಸಿಡಿಸಿದ್ದರು. ಈ ಮೂಲಕ 7 ಎಸೆತಗಳಲ್ಲಿ 21 ರನ್ಗಳ ಕೊಡುಗೆ ನೀಡಿದ್ದರು.
- ಬುಮ್ರಾ ಮ್ಯಾಜಿಕ್ ಸ್ಪೆಲ್: ಇಂಗ್ಲೆಂಡ್ ತಂಡವು ಗೆಲುವಿನ ಹಾದಿಯಲ್ಲಿದ್ದಾಗಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅಂದರೆ ಅಂತಿಮ ಎರಡು ಓವರ್ಗಳಲ್ಲಿ ಬುಮ್ರಾ ನೀಡಿದ್ದರು ಕೇವಲ 14 ರನ್ಗಳು ಮಾತ್ರ.
- 16ನೇ ಓವರ್ನಲ್ಲಿ 8 ರನ್ ನೀಡಿದ್ದ ಬುಮ್ರಾ 18ನೇ ಓವರ್ನಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 6 ರನ್ಗಳು ಮಾತ್ರ. ಈ ಎರಡು ಓವರ್ಗಳು ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿತು.
- ಅಕ್ಷರ್ ಪಟೇಲ್ ಕೈಚಳಕ: ಅಕ್ಷರ್ ಪಟೇಲ್ ಹಿಡಿದ ಎರಡು ಅದ್ಭುತ ಕ್ಯಾಚ್‌ಗಳು ಪಂದ್ಯದ ಗತಿಯನ್ನು ಬದಲಿಸಿದವು. ಮೊದಲಿಗೆ ಹ್ಯಾರಿ ಬ್ರೂಕ್ ಅವರ ಅದ್ಭುತ ಕ್ಯಾಚ್ ಹಿಡಿದಿದ್ದ ಅಕ್ಷರ್ ಪಟೇಲ್, ಆ ಬಳಿಕ ಡೇಂಜರಸ್ ವಿಲ್ ಜ್ಯಾಕ್ಸ್ ಅವರ ರಿಲೇ ಕ್ಯಾಚ್ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.
Axar Patel’s stunning effort and Shivam Dube’s able support puts an end to Will Jacks’ attack 👊#T20WorldCup broadcast details 👉 https://t.co/NPykWM7qqY pic.twitter.com/U83ZnQJTZt
— ICC (@ICC) March 5, 2026
ಅಂದರೆ ಇಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ 7 ರನ್ಗಳ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದ್ದು ಅಕ್ಷರ್ ಪಟೇಲ್ ಅವರ ಅತ್ಯದ್ಭುತ ಫೀಲ್ಡಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಮಿಂಚಿನ ದಾಳಿ ಎನ್ನಬಹುದು.
ಇದನ್ನೂ ಓದಿ: IND vs ENG: ಒಬ್ಬ ಮಾಡಿದ ತಪ್ಪಿಗೆ ಭಾರೀ ಬೆಲೆ ತೆತ್ತ ಇಂಗ್ಲೆಂಡ್
ಅದರಲ್ಲೂ ನಿರ್ಣಾಯಕ ಹಂತದಲ್ಲಿ 2 ಓವರ್ಗಳಲ್ಲಿ ಕೇವಲ 14 ರನ್ ನೀಡುವ ಮೂಲಕ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟಿದ್ದರು. ಬುಮ್ರಾ ಅವರ ಈ ಬುಮ್ರಾಸ್ತ್ರದಿಂದ ಭಾರತ ತಂಡವು 7 ರನ್ಗಳ ಜಯ ಸಾಧಿಸಲು ಸಾಧ್ಯವಾಯಿತು ಎಂದರೂ ತಪ್ಪಾಗಲಾರದು.