
ಸಂಜು ಸ್ಯಾಮ್ಸನ್… ಸಾಮರ್ಥ್ಯ, ಧೃಡ ಸಂಕಲ್ಪ ಬಿಟ್ಟು ಕೊಡದ ಮನೋಭಾವ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ತಕ್ಕ ಉದಾಹರಣೆ. ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳ ಮೊದಲು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ ಸ್ಯಾಮ್ಸನ್, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಕೆಟ್ಟ ಪ್ರದರ್ಶನದ ಪರಿಣಾಮವಾಗಿ ಟಿ20 ವಿಶ್ವಕಪ್ ತಂಡದಲ್ಲಿ ಎರಡನೇ ಆರಂಭಿಕ ಆಟಗಾರನಾಗಬೇಕಾಯಿತು. ಈ ಎಲ್ಲಾ ಅವಮಾನಗಳ ನಡುವೆಯೂ ಸಿಕ್ಕ ಅವಕಾಶವನ್ನು ದೋಚಿಕೊಂಡ ಸಂಜು ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇದಕ್ಕೆ ಉಡುಗೊರೆಯಾಗಿ ಸಂಜು ಸ್ಯಾಮ್ಸನ್ಗೆ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯೂ ಲಭಿಸಿತು.
ಲೀಗ್ ಹಂತದಲ್ಲಿ 1 ಪಂದ್ಯ
ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾದ ಕಾರಣ ಸಂಜುಗೆ ಆಡುವ ಅವಕಾಶ ಸಿಕ್ಕಿತು. ನಮೀಬಿಯಾ ವಿರುದ್ಧದ ಲೀಗ್ ಪಂದ್ಯದಲ್ಲಿ 22 ರನ್ ಬಾರಿಸಿದ ಸಂಜುಗೆ ನಂತರ ಅವಕಾಶ ಸಿಗಲಿಲ್ಲ. ಆದರೆ ಅಭಿಷೇಕ್ ಶರ್ಮಾರ ಕಳಪೆ ಪ್ರದರ್ಶನ ಹಾಗೂ ರಿಂಕು ಸಿಂಗ್ ಅವರ ತಂದೆಯ ನಿಧನದಿಂದಾಗಿ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡ ಸಂಜು ಆ ನಂತರ ನಿರ್ಮಿಸಿದ್ದು ಇತಿಹಾಸ.
ಹ್ಯಾಟ್ರಿಕ್ ಅರ್ಧಶತಕ
ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 24 ರನ್ ಬಾರಿಸಿದ ಸಂಜು ಮುಂದಿನ ಮೂರು ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಗೆಲುವಿನ ಹೀರೋ ಎನಿಸಿಕೊಂಡರು. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಸೂಪರ್ 8 ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ಸಂಜು ಆರಂಭಿಕನಾಗಿ ಬಂದು ಕೊನೆಯವರೆಗೂ ಅಜೇಯರಾಗಿ ಉಳಿದು 97 ರನ್ ಬಾರಿಸಿ ತಂಡವನ್ನು ಸೆಮಿಫೈನಲ್‌ಗೇರಿಸಿದ್ದರು. ನಂತರ ಸೆಮಿಫೈನಲ್ನಲ್ಲೂ ಅಬ್ಬರಿಸಿದ ಸಂಜು ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ 89 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲೂ ಸಂಜು ಬ್ಯಾಟ್ನಿಂದ 89 ರನ್ಗಳ ಇನ್ನಿಂಗ್ಸ್ ಮೂಡಿಬಂತು.
ಸ್ಯಾಮ್ಸನ್ಗೆ ಟೂರ್ನಮೆಂಟ್ ಆಟಗಾರ ಪ್ರಶಸ್ತಿ
ಈ ವಿಶ್ವಕಪ್‌ನಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ 80.2 ಸರಾಸರಿಯಲ್ಲಿ 321 ರನ್ ಬಾರಿಸುವ ಮೂಲಕ ಒಂದು ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದರು. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ 24 ಸಿಕ್ಸರ್‌ಗಳನ್ನು ಬಾರಿಸಿದರು. ಇದಲ್ಲದೆ ನಾಲ್ಕು ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ