ಕಳಪೆ ಫಾರ್ಮ್ನಿಂದಾಗಿ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ನಿಂದಲೇ ಹೊರಬಿದ್ದಿದ್ದ ಸಂಜು ಸ್ಯಾಮ್ಸನ್ ಆ ಬಳಿಕ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಮಾತ್ರವಲ್ಲದೆ ಟೀಂ ಇಂಡಿಯಾದ ಎರಡು ನಿರ್ಣಾಯಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಫೈನಲ್ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಬ್ಯಾಟ್ನಿಂದ ಅದೇ ರೀತಿಯ ಇನ್ನಿಂಗ್ಸ್ ಮೂಡಿಬಂದಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು. ಈ ಫೈನಲ್ನಲ್ಲಿ ಅರ್ಧಶತಕ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ್ದು ಮಾತ್ರವಲ್ಲದೆ, ಹ್ಯಾಟ್ರಿಕ್ ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮಾತ್ರವಲ್ಲದೆ ನಾಕೌಟ್ ಸುತ್ತಿಗೆ ಮುನ್ನ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಅಜೇಯ 97 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು.
ಇನ್ನು ಈ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅವರೊಂದಿಗೆ 98 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಅಭಿಷೇಕ್ ಬಿರುಗಾಳಿಯ ಇನ್ನಿಂಗ್ಸ್ ಆಡಿದರೆ, ಸಂಜು ಸ್ಯಾಮ್ಸನ್ ಕೂಡ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ, ವಿರಾಟ್ ಕೊಹ್ಲಿ 12 ವರ್ಷಗಳ ಹಿಂದೆ ಮಾಡಿದ್ದ ಸಾಧನೆಯನ್ನು ಸ್ಯಾಮ್ಸನ್ ಸರಿಗಟ್ಟಿದರು.
ಟಿ20 ವಿಶ್ವಕಪ್ನ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಐವತ್ತಕ್ಕೂ ಹೆಚ್ಚು ಸ್ಕೋರ್ಗಳನ್ನು ಗಳಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್. ಹಾಗೆಯೇ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಸಂಜು ಪಾತ್ರರಾಗಿದ್ದಾರೆ. ಸಂಜುಗೂ ಮೊದಲು ವಿರಾಟ್ ಕೊಹ್ಲಿ 2014 ರ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಂತರ ಟಿ20 ವಿಶ್ವಕಪ್ನಲ್ಲಿ ಸತತ ಮೂರು ಅರ್ಧಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ.
ಈ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 89 ರನ್ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಸತತ ಮೂರನೇ ಪಂದ್ಯದಲ್ಲೂ ಸಂಜು ಶತಕ ವಂಚಿತರಾದರು. ಆದಾಗ್ಯೂ ಈ ಇನ್ನಿಂಗ್ಸ್ ಮೂಲಕ ಸಂಜು ಒಂದು ಆವೃತ್ತಿಯ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿದರು.
ಸಂಜು ಈ ವಿಶ್ವಕಪ್ನಲ್ಲಿ ಆಡಿದ ಐದು ಪಂದ್ಯಗಳಲ್ಲಿ 321 ರನ್ ಬಾರಿಸಿದ್ದಾರೆ. ಇದು ಟಿ20 ವಿಶ್ವಕಪ್ನಲ್ಲಿ ಯಾವುದೇ ಭಾರತೀಯ ಆಟಗಾರ ಗಳಿಸಿದ ಅತ್ಯಧಿಕ ರನ್ ಆಗಿದೆ. ಇದಕ್ಕೂ ಮೊದಲು, ವಿರಾಟ್ 2014 ರ ಟಿ20 ವಿಶ್ವಕಪ್ನಲ್ಲಿ 319 ರನ್ ಸಿಡಿಸಿದ್ದರು. ಇದೀಗ 12 ವರ್ಷಗಳ ನಂತರ ಈ ದಾಖಲೆ ಸಂಜು ಪಾಲಾಗಿದೆ. ಸಂಜು ಸ್ಯಾಮ್ಸನ್ ಐದು ಪಂದ್ಯಗಳಲ್ಲಿ 80.2 ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ. ಇದರಲ್ಲಿ 24 ಸಿಕ್ಸರ್ಗಳು ಮತ್ತು 27 ಬೌಂಡರಿಗಳು ಸೇರಿವೆ.






