T20 World Cup 2026: ಟಿ20 ವಿಶ್ವಕಪ್ನ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಈ ಎಂಟು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳಿರುವುದು ವಿಶೇಷ. ಅಂದರೆ ಗ್ರೂಪ್-ಎ ಯಿಂದ ಉಭಯ ತಂಡಗಳು ಸೂಪರ್-8 ಸುತ್ತಿಗೆ ಪ್ರವೇಶಿಸಿದೆ. ಇದಾಗ್ಯೂ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗುವುದಿಲ್ಲ.
ಏಕೆಂದರೆ ಉಭಯ ತಂಡಗಳು ಬೇರೆ ಬೇರೆ ಗ್ರೂಪ್ಗಳಲ್ಲಿ ಸ್ಥಾನ ಪಡೆದಿದೆ. ಅಂದರೆ ಸೂಪರ್-8 ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಆ ಗ್ರೂಪ್ಗಳಲ್ಲಿರುವ ತಂಡಗಳು…
- ಗ್ರೂಪ್ 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
- ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.
ಸೂಪರ್-8 ಪಂದ್ಯಗಳು ನಡೆಯುವುದು ಗ್ರೂಪ್ಗಳಲ್ಲಿರುವ ತಂಡಗಳ ನಡುವೆ. ಅಂದರೆ ಭಾರತ ತಂಡವು ತನ್ನ ಗ್ರೂಪ್ನಲ್ಲಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ತಲಾ ಒಂದೊಂದು ಪಂದ್ಯಗಳನ್ನಾಡಲಿದೆ.
ಅತ್ತ ಗ್ರೂಪ್-2 ನಲ್ಲಿರುವ ಪಾಕಿಸ್ತಾನ್ ತಂಡವು ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಗೆ ಯಾವುದೇ ಅವಕಾಶವಿಲ್ಲ. ಇದಾಗ್ಯೂ ಮುಂದಿನ ಹಂತಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎದುರಾಗಬಹುದು.
ನಾಕೌಟ್ನಲ್ಲಿ ಮುಖಾಮುಖಿ:
ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್ಗಳಿಗೂ ಪ್ರತ್ಯೇಕ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಅಂಕ ಪಟ್ಟಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಟಾಪ್-2 ನಲ್ಲಿ ಕಾಣಿಸಿಕೊಂಡರೆ ಮಾತ್ರ ಸೆಮಿಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಬಹುದು.
ಆದರೆ ಇಲ್ಲಿ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಬೇಕಿದ್ದರೆ ಪಾಯಿಂಟ್ಸ್ ಟೇಬಲ್ನಲ್ಲಿ ಉಭಯ ತಂಡಗಳ ಸ್ಥಾನಗಳು ಬದಲಾಗಬೇಕು. ಅದರ ವಿವರಗಳು ಈ ಕೆಳಗಿನಂತಿದೆ…
- ಸೂಪರ್-8 ಸುತ್ತಿನಲ್ಲಿ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಪಾಕಿಸ್ತಾನ್ ದ್ವಿತೀಯ ಸ್ಥಾನ ಪಡೆಯಬೇಕು. ಹೀಗಾದಲ್ಲಿ ಮಾತ್ರ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
- ಸೂಪರ್-8 ಸುತ್ತಿನಲ್ಲಿ ಗ್ರೂಪ್-2ರ ಪಾಯಿಂಟ್ಸ್ ಟೇಬಲ್ನಲ್ಲಿ ಪಾಕಿಸ್ತಾನ್ ತಂಡ ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದರೂ ಸಹ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಎದುರು ಬದುರಾಗಲಿದೆ.
ಫೈನಲ್ನಲ್ಲಿ ಮುಖಾಮುಖಿ:
ಭಾರತ ಮತ್ತು ಪಾಕಿಸ್ತಾನ್ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳನ್ನು ಅಥವಾ ಎರಡನೇ ಸ್ಥಾನಗಳನ್ನು ಪಡೆದರೆ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಗೆದ್ದರೆ ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಇದನ್ನೂ ಓದಿ: T20 World Cup 2026: ಸೂಪರ್-8 ಸುತ್ತಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಅಂದರೆ ಉಭಯ ತಂಡಗಳು ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ ಅಥವಾ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರೆ ಸೆಮಿಫೈನಲ್ನಲ್ಲಿ ಬೇರೆ ತಂಡಗಳ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿ ಭಾರತ ಮತ್ತು ಪಾಕಿಸ್ತಾನ್ ಫೈನಲ್ಗೇರಿದರೆ ಮಾತ್ರ ಮತ್ತೊಮ್ಮೆ ಇಂಡೊ-ಪಾಕ್ ಕ್ರಿಕೆಟ್ ಕದನ ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರೆಯಲಿದೆ.