Headlines

IND vs ZIM: ಜಿಂಬಾಬ್ವೆ ವಿರುದ್ಧ ಗೆದ್ದ ಭಾರತದ ಸೆಮಿಫೈನಲ್ ಕನಸು ಜೀವಂತ – Kannada News | T20 WC 2026: India Beats Zimbabwe in Super 8, Keeps Semi Final Hopes Alive

2026 ರ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿನಲ್ಲಿ ಭಾರತ ಮತ್ತು ಜಿಂಬಾಬ್ವೆ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 72 ರನ್​ಗಳಿಂದ ಗೆದ್ದುಕೊಂಡ ಆತಿಥೇಯ ಭಾರತ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ ಸತತ ಎರಡನೇ ಪಂದ್ಯದಲ್ಲಿ ಸೋತ ಜಿಂಬಾಬ್ವೆ ಸೆಮಿಫೈನಲ್ ರೇಸ್​​ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್‌ಗಳ ನಷ್ಟಕ್ಕೆ 256 ರನ್ ಗಳಿಸಿತು. ಗೆಲುವಿಗೆ 257 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಭಾರತ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಸಂಜು ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 48 ರನ್ ಸೇರಿಸಿದರು. ಸಂಜು 24 ರನ್ ಗಳಿಸಿ ಔಟಾದರು. ಇಲ್ಲಿಂದ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಎರಡನೇ ವಿಕೆಟ್‌ಗೆ 72 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ಅಭಿಷೇಕ್ 26 ಎಸೆತಗಳಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್ ಅರ್ಧಶತಕವನ್ನು ಪೂರೈಸಿದರು. ಮಾತ್ರವಲ್ಲದೆ ಪ್ರಸ್ತುತ ವಿಶ್ವಕಪ್‌ನಲ್ಲಿ ಅಭಿಷೇಕ್ 50ರ ಗಡಿ ದಾಟಿದ್ದು ಇದೇ ಮೊದಲು.

ಭಾರತದ ಎರಡನೇ ವಿಕೆಟ್ ಇಶಾನ್ ಕಿಶನ್ (38 ರನ್) ರೂಪದಲ್ಲಿ ಪತನವಾಯಿತು. ಇಶಾನ್ ಔಟಾದ ಸ್ವಲ್ಪ ಸಮಯದ ನಂತರ, ಅಭಿಷೇಕ್ ಶರ್ಮಾ ಕೂಡ ಔಟಾದರು. ಅಭಿಷೇಕ್ 30 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳು ಸೇರಿದಂತೆ 55 ರನ್ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದಂತೆ 33 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು.

ಆ ಬಳಿಕ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅಜೇಯ 84 ರನ್ ಗಳಿಸಿ ಭಾರತವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಹಾರ್ದಿಕ್ 23 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ ಅಜೇಯ 50 ರನ್ ಗಳಿಸಿದರೆ, ತಿಲಕ್ ವರ್ಮಾ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸೇರಿದಂತೆ ಅಜೇಯ 44 ರನ್ ಬಾರಿಸಿದರು.

256 ರನ್ ಬೆನ್ನಟ್ಟಿದ ಜಿಂಬಾಬ್ವೆ ತಂಡವು ನಿಧಾನಗತಿಯ ಆರಂಭವನ್ನು ಪಡೆಯಿತು. ಬ್ರಿಯಾನ್ ಬೆನೆಟ್ ಮತ್ತು ತಡಿವಾನಾಶೆ ಮರುಮಾನಿ 6.2 ಓವರ್‌ಗಳಲ್ಲಿ 44 ರನ್‌ಗಳನ್ನು ಸೇರಿಸಿದರು. ಅಕ್ಷರ್ ಪಟೇಲ್ ಮರುಮಾನಿ (20) ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ನಂತರ ವರುಣ್ ಚಕ್ರವರ್ತಿ ಕೇವಲ 6 ರನ್‌ಗಳಿಗೆ ಡಿಯೋನ್ ಮೈಯರ್ಸ್ ಅವರನ್ನು ಔಟ್ ಮಾಡಿದರು. ಅಲ್ಲಿಂದ ನಾಯಕ ಸಿಕಂದರ್ ರಜಾ ಮತ್ತು ಬ್ರಿಯಾನ್ ಬೆನೆಟ್ ಮೂರನೇ ವಿಕೆಟ್‌ಗೆ 72 ರನ್‌ಗಳನ್ನು ಸೇರಿಸಿದರು. ರಜಾ 21 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ 31 ರನ್‌ಗಳ ಕೊಡುಗೆ ನೀಡಿದರು.

ಜಿಂಬಾಬ್ವೆ ತಂಡದ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಸಿಕಂದರ್ ರಜಾ ಮತ್ತು ರಿಯಾನ್ ಬರ್ಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಶಿವಂ ದುಬೆ ಬೌಲಿಂಗ್‌ನಲ್ಲಿ ಮುಷೆಕಿವಾ 7 ರನ್ ಗಳಿಸಿ ಔಟಾದರು. ವಿಕೆಟ್ ಪತನದ ನಡುವೆಯೂ, ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಕೊನೆಯವರೆಗೂ ಕ್ರೀಸ್‌ನಲ್ಲಿಯೇ ಉಳಿದು 59 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 97 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

Source link

Leave a Reply

Your email address will not be published. Required fields are marked *