T20 World Cup 2026: ಭಾರತ ಮತ್ತು ಝಿಂಬಾಬ್ವೆ ನಡುವಣ ನಿರ್ಣಾಯಕ ಪಂದ್ಯಕ್ಕಾಗಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಬ್ಬನಿಯನ್ನು ತಡೆಗಟ್ಟಲು “ಡ್ಯೂ ಕ್ಯೂರ್” (Dew Cure) ಎಂಬ ವಿಶೇಷ ರಾಸಾಯನಿಕವನ್ನು ಬಳಸಲಾಗಿದೆ. ಪಂದ್ಯದ ವೇಳೆ ಎದುರಾಗುವ ಇಬ್ಬನಿ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಈ ರಾಸಾಯನಿಕವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ.
“ಡ್ಯೂ ಕ್ಯೂರ್” ಕೆಮಿಕಲ್ ಅನ್ನು ಸಾಮಾನ್ಯವಾಗಿ ಅಮೆರಿಕದ ಮೇಜರ್ ಲೀಗ್ ಬೇಸ್ಬಾಲ್ (MLB) ಪಂದ್ಯಗಳಲ್ಲಿ ಮೈದಾನವನ್ನು ಒಣಗಿಸಲು ಬಳಸಲಾಗುತ್ತದೆ. ಇದೀಗ ಇದೇ ವಿಶೇಷ ರಾಸಾಯನಿಕವನ್ನು ಚೆನ್ನೈನ ಚೆಪಾಕ್ ಮೈದಾನಕ್ಕೆ ಸಿಂಪಡಿಸಲಾಗಿದೆ.
“ಡ್ಯೂ ಕ್ಯೂರ್” ಹೇಗೆ ಕಾರ್ಯ ನಿರ್ವಹಿಸುತ್ತೆ?
“ಡ್ಯೂ ಕ್ಯೂರ್” ಅನ್ನು ನೀರಿನೊಂದಿಗೆ ಬೆರೆಸಿ ಹುಲ್ಲಿನ ಮೇಲೆ ಸಿಂಪಡಿಸಲಾಗುತ್ತದೆ. ಇದು ಹುಲ್ಲಿನ ಎಲೆಗಳ ಮೇಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ರಾತ್ರಿಯ ಸಮಯದಲ್ಲಿ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿದ್ದರೂ ಮೈದಾನ ಒಣಗಿಯೇ ಇರುತ್ತದೆ.
ಚೆನ್ನೈನಲ್ಲಿ ತೇವಾಂಶ 80-90% ಕ್ಕಿಂತ ಹೆಚ್ಚಿರುವ ಕಾರಣ, ತಮಿಳುನಾಡು ಕ್ರಿಕೆಟ್ ಸಂಸ್ಥೆಯು (TNCA) ಮಂಗಳವಾರ ಮತ್ತು ಬುಧವಾರವೇ ಇದನ್ನು ಸಿಂಪಡಿಸಿದೆ. ಪಂದ್ಯದ ದಿನವಾದ ಗುರುವಾರ ಮಧ್ಯಾಹ್ನವೂ ಮತ್ತೊಮ್ಮೆ ಸಿಂಪಡಿಸುವ ಗುರಿ ಹೊಂದಿದೆ.
ಇದರಿಂದಾಗುವ ಲಾಭವೇನು?
ಸಾಮಾನ್ಯವಾಗಿ ರಾತ್ರಿ ಪಂದ್ಯಗಳ ವೇಳೆ ಇಬ್ಬನಿ ಬಿದ್ದಾಗ ಬಾಲ್ ಒದ್ದೆಯಾಗುವುದರಿಂದ ಬೌಲರ್ಗಳಿಗೆ ಚೆಂಡನ್ನು ಹಿಡಿಯಲು ಗ್ರಿಪ್ ಸಿಗುವುದಿಲ್ಲ. ಇದರಿಂದ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗುತ್ತದೆ. ಈ ಸಮಸ್ಯೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಅದರಂತೆ ಕಳೆದ ಎರಡು ದಿನಗಳ ಕಾಲ ಚೆನ್ನೈನ ಎಂಎ ಚಿದಂಬರಂ ಮೈದಾನಕ್ಕೆ “ಡ್ಯೂ ಕ್ಯೂರ್” ಅನ್ನು ಸಿಂಪಡಿಸಲಾಗಿದೆ. ಇನ್ನು ಕಳೆದ ರಾತ್ರಿ ಭಾರತ ತಂಡವು ಅಭ್ಯಾಸ ನಡೆಸಿದ್ದು, ಈ ವೇಳೆ ಮೈದಾನದಲ್ಲಿ ಇಬ್ಬನಿ ಇಲ್ಲದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದೆ.
ಈ ಪ್ರಯೋಗ ಯಶಸ್ವಿಯಾದರೆ, ಮುಂಬರುವ ಐಪಿಎಲ್ 2026 ರ ಎಲ್ಲಾ ಪಂದ್ಯಗಳಲ್ಲಿ ಹಾಗೂ ವಿಶ್ವಕಪ್ನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿಯೂ “ಡ್ಯೂ ಕ್ಯೂರ್” ಬಳಸಲು ಬಿಸಿಸಿಐ ಚಿಂತನೆ ನಡೆಸಿದೆ.
ಪಂದ್ಯ ಗೆಲ್ಲಲು ಪ್ಲ್ಯಾನ್?
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಒಟ್ಟು 6 ಪಂದ್ಯಗಳನ್ನಾಡಲಾಗಿದೆ. ಈ ಪಂದ್ಯಗಳ ವೇಳೆ ಒಮ್ಮೆಯೂ “ಡ್ಯೂ ಕ್ಯೂರ್” ಬಳಸಲಾಗಿಲ್ಲ. ಆದರೆ ಭಾರತ ತಂಡದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಅನುಕೂಲವಾಗಲೆಂದೇ “ಡ್ಯೂ ಕ್ಯೂರ್” ಬಳಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಚೆನ್ನೈ ಪಿಚ್ನಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ 2ನೇ ಬ್ಯಾಟಿಂಗ್ ವೇಳೆ ಇಬ್ಬನಿ ಇರುವುದರಿಂದ ಬೌಲಿಂಗ್ ಮಾಡುವುದು ಕಷ್ಟಕರ. ಇತ್ತ ಟಾಸ್ ಸೋತರೆ ಟೀಮ್ ಇಂಡಿಯಾ ಗೆಲುವು ಕೂಡ ಕಷ್ಟವಾಗಲಿದೆ. ಅದರಲ್ಲೂ ನೆಟ್ ರನ್ ರೇಟ್ ಟಾರ್ಗೆಟ್ನೊಂದಿಗೆ ಗೆಲ್ಲಲು ಭಾರತ ತಂಡ ಪ್ಲ್ಯಾನ್ ರೂಪಿಸುತ್ತಿದೆ.
ಇದರ ನಡುವೆ ಇಬ್ಬನಿ ಸಮಸ್ಯೆಯನ್ನೇ ಇಲ್ಲದಾಗಿಸುವ ಮೂಲಕ ಟಾಸ್ ಚಿಂತೆಯನ್ನು ದೂರ ಮಾಡಿದ್ದಾರೆ. ಇದು ಟೀಮ್ ಇಂಡಿಯಾಗೆ ಅನುಕೂಲ ಮಾಡಿಕೊಡಲೆಂದೇ ಮಾಡಿದ ತಂತ್ರ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಭಾರತದ ಪಂದ್ಯಕ್ಕೂ ಚೆನ್ನೈ ಮೈದಾನದಲ್ಲಿ ಸಿಂಪಡಿಸಿದ “ಡ್ಯೂ ಕ್ಯೂರ್” ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ.
ಚೆನ್ನೈ ಪಿಚ್ ರಿಪೋರ್ಟ್:
ಚೆನ್ನೈನ ಎಂಎ ಚಿದಂಬರಂ ಮೈದಾನವು ಸಾಂಪ್ರದಾಯಿಕವಾಗಿ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿನ ಪಿಚ್ ಒಣಗಿದ್ದು, ಚೆಂಡು ನಿಧಾನವಾಗಿ ಬ್ಯಾಟ್ಗೆ ಬರುತ್ತದೆ. ಇದರಿಂದ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಚೆನ್ನೈನಲ್ಲಿ ರಾತ್ರಿ ವೇಳೆ ಇಬ್ಬನಿ ಬರುವುದರಿಂದ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭವಾಗುತ್ತಿತ್ತು. ಆದರೆ, ಈ ಬಾರಿ “ಡ್ಯೂ ಕ್ಯೂರ್” ರಾಸಾಯನಿಕ ಬಳಸಿರುವುದರಿಂದ ಮೈದಾನ ಒಣಗಿರಲಿದೆ. ಇದರಿಂದ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲು ಹೆಚ್ಚು ಆಸಕ್ತಿ ತೋರಿಸಬಹುದು, ಏಕೆಂದರೆ ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಮತ್ತಷ್ಟು ನಿಧಾನಗತಿಯಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಝಿಂಬಾಬ್ವೆ ವಿರುದ್ಧ ಭಾರತ ಎಷ್ಟು ರನ್ಗಳಿಂದ ಗೆಲ್ಲಬೇಕು?
ಇನ್ನು ಈ ಮೈದಾನದಲ್ಲಿ ಹೈ-ಸ್ಕೋರಿಂಗ್ ನಿರೀಕ್ಷಿಸುವಂತಿಲ್ಲ. ಇಲ್ಲಿ 160 ರಿಂದ 175 ರನ್ಗಳು ಸವಾಲಿನ ಮೊತ್ತವೆಂದು ಪರಿಗಣಿಸಲ್ಪಡುತ್ತವೆ. ಪಂದ್ಯ ಮುಂದುವರಿದಂತೆ ಬ್ಯಾಟಿಂಗ್ ಕಷ್ಟವಾಗುವುದರಿಂದ, ಮೊದಲ 6 ಓವರ್ಗಳ ಪವರ್ಪ್ಲೇನಲ್ಲಿ ಗರಿಷ್ಠ ರನ್ ಗಳಿಸುವುದು ತಂಡಗಳಿಗೆ ಮುಖ್ಯವಾಗುತ್ತದೆ.
Published On – 11:07 am, Thu, 26 February 26