IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ (Mohammed Shami) ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಇನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ.
ಲಕ್ನೋನ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಲು ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಅವರನ್ನು ಮೊಹಮ್ಮದ್ ಶಮಿ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.
ಈ ವಿಕೆಟ್ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್ನ ಮೊದಲ ಎಸೆತದಲ್ಲಿ 5 ಬಾರಿ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆಯನ್ನು ಮೊಹಮ್ಮದ್ ಶಮಿ ತಮ್ಮದಾಗಿಸಿಕೊಂಡಿದ್ದಾರೆ. ಶಮಿ ಈ ಹಿಂದೆ ಇನಿಂಗ್ಸ್ನ ಮೊದಲ ಎಸೆತದಲ್ಲಿ ಜಾಕ್ ಕಾಲಿಸ್ (2014), ಕೆಎಲ್ ರಾಹುಲ್ (2022), ಫಿಲ್ ಸಾಲ್ಟ್ (2023), ಶೇಕ್ ರಶೀದ್ (2025) ಅವರ ವಿಕೆಟ್ ಪಡೆದಿದ್ದರು.
ಇದೀಗ ಕೆಎಲ್ ರಾಹುಲ್ ಅವರನ್ನು ಮತ್ತೊಮ್ಮೆ ಮೊದಲ ಎಸೆತದಲ್ಲೇ ಔಟ್ ಮಾಡುವ ಮೂಲಕ ಐಪಿಎಲ್ನಲ್ಲಿ 5 ಬಾರಿ ಇನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲಿ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದೇ ಬ್ಯಾಟರ್ನ ಎರಡು ಬಾರಿ ಇನಿಂಗ್ಸ್ನ ಮೊದಲ ಎಸೆತದಲ್ಲಿ ಔಟ್ ಮಾಡಿದ 2ನೇ ವೇಗಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ಸಾಧನೆ ಮಾಡಿದ್ದು ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ. 2011 ರಲ್ಲಿ ಮತ್ತು 2015 ರಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಇನಿಂಗ್ಸ್ನ ಮೊದಲ ಎಸೆತದಲ್ಲೇ ಔಟ್ ಮಾಡಿ ಮಾಲಿಂಗ ಈ ದಾಖಲೆ ಬರೆದಿದ್ದರು. ಇದೀಗ ಕೆಎಲ್ ರಾಹುಲ್ ಅವರನ್ನು ಎರಡು ಬಾರಿ (2022, 2026) ಮೊದಲ ಎಸೆತಗಳಲ್ಲಿ ಔಟ್ ಮಾಡಿ ಮೊಹಮ್ಮದ್ ಶಮಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 4 ಓವರ್ಗಳನ್ನು ಎಸೆದ ಮೊಹಮ್ಮದ್ ಶಮಿ ಕೇವಲ 28 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಈ ಉತ್ತಮ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.1 ಓವರ್ಗಳಲ್ಲಿ 145 ರನ್ ಬಾರಿಸುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿದೆ.





