2024 ರ ಐಪಿಎಲ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ ಅಭಿಷೇಕ್ ಶರ್ಮಾ, ಸುಮಾರು ಒಂದೂವರೆ ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದೇ ರೀತಿಯ ಸಂಚಲನ ಸೃಷ್ಟಿಸುವುದನ್ನು ಮುಂದುವರೆಸಿದ್ದರು. ಆದಾಗ್ಯೂ, 2026 ರ ವರ್ಷ ಅವರಿಗೆ ಇದುವರೆಗೆ ಉತ್ತಮವಾಗಿಲ್ಲ. ಒಂದೆಡೆ ರನ್ ಬರ ಎದುರಿಸುತ್ತಿರುವ ಅಭಿಷೇಕ್ಗೆ ಖಾತೆ ತೆರೆಯುತ್ತಿರುವುದು ಕೂಡ ಕಷ್ಟವಾಗಿದೆ.
2026 ರ ಟಿ20 ವಿಶ್ವಕಪ್ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದ ಅಭಿಷೇಕ್ ಶರ್ಮಾ ಇದೀಗ ಐಪಿಎಲ್ನಲ್ಲಿಯೂ ಸಹ ಸೊನ್ನೆ ಸುತ್ತುವ ಕೆಲಸವನ್ನು ಮುಂದುವರೆಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ನಲ್ಲಿಯೇ ಅವರು ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.
2026 ರಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆಯಲು ವಿಫಲರಾಗಿರುವುದು ಇದು ಆರನೇ ಬಾರಿ. ಜನವರಿ 21 ರಿಂದ ಏಪ್ರಿಲ್ 5 ರವರೆಗೆ ನಡೆದ ಟಿ20 ಸರಣಿಯಲ್ಲಿ ಅಭಿಷೇಕ್ ಒಟ್ಟು 75 ದಿನಗಳಲ್ಲಿ 14 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಆರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಅಭಿಷೇಕ್ ಎರಡು ಬಾರಿ ಖಾತೆ ತೆರೆಯಲು ವಿಫಲರಾಗಿದ್ದರು.
ಅಭಿಷೇಕ್ ಐಪಿಎಲ್ 2026 ರಲ್ಲಿ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಆದರೆ ಆ ಮೂರು ಇನ್ನಿಂಗ್ಸ್ಗಳಲ್ಲಿ ಅವರು 18 ರ ಸರಾಸರಿಯಲ್ಲಿ ಕೇವಲ 55 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ಅವರು ಕೆಕೆಆರ್ ವಿರುದ್ಧ 48 ಮತ್ತು ಆರ್ಸಿಬಿ ವಿರುದ್ಧ ಕೇವಲ 7 ರನ್ ಗಳಿಸಿದ್ದರು.
ಇದೀಗ ಏಪ್ರಿಲ್ 11 ರ ಶನಿವಾರದಂದು ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಲೀಗ್ನಲ್ಲಿ ಮೂರು ಪಂದ್ಯಗಳನ್ನಾಡಿರುವ ಸನ್ರೈಸರ್ಸ್ ಒಂದು ಪಂದ್ಯವನ್ನು ಗೆದ್ದು ಎರಡು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಸನ್ರೈಸರ್ಸ್ ತಂಡ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಾಗಬೇಕಿದ್ದರೆ, ಅಭಿಷೇಕ್ ತಂಡದ ಪರ ಅಬ್ಬರಿಸಬೇಕಿದೆ.




