Headlines

Maha Shivratri Recipes: ಶಿವರಾತ್ರಿಯಂದು ಮಹಾದೇವನನ್ನು ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ – Kannada News | Maha Shivratri Recipes: Prepare these Recipes beloved by Lord Shiva at home on Maha Shivratri

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಹಾಶಿವರಾತ್ರಿ (Maha Shivratri) ಹಬ್ಬವೂ ಒಂದು. ಪ್ರತಿವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.  ಇದು ಶಿವ ಪಾರ್ವತಿ ವಿವಾಹವಾದ ಶುಭ ದಿನ. ಮಾಘ ಬಹುಳ ಚತುರ್ದಶಿಯ ರಾತ್ರಿ ಶಿವ ಪಾರ್ವತಿಯನ್ನು ವರಿಸಿದ್ದರಂತೆ, ಹೀಗಾಗಿ ಅಂದು ರಾತ್ರಿ ದೇವಾನುದೇವತೆಗಳೆಲ್ಲಾ ಜಾಗರಣೆ ಮಾಡುವ ಮೂಲಕ ಗಿರಿಜಾ ಕಲ್ಯಾಣ ವೀಕ್ಷಿಸಿ ಶಿವ-ಪಾರ್ವತಿಯನ್ನು ಪೂಜಿಸಿದರಂತೆ. ಹಾಗಾಗಿ ಇಂದಿಗೂ ಶಿವರಾತ್ರಿಯ ದಿನ ಜಾಗರಣೆ ಮಾಡುವ, ಶಿವ ಕಥೆಗಳನ್ನು ಕೇಳುವ ಸಂಪ್ರದಾಯವಿದೆ. ಜೊತೆಗೆ ಈ ದಿನ ಶಿವದೇವರಿಗೆ ಪ್ರಿಯವಾದ ನೈವೇದ್ಯಗಳನ್ನೂ ಅರ್ಪಿಸಲಾಗುತ್ತದೆ. ಶಿವನ ಕೃಪೆಗೆ ಪಾತ್ರರಾಗಲು ಈ ಬಾರಿ ಹಬ್ಬದ ದಿನ ಈ ನೈವೇದ್ಯಗಳನ್ನು ಮನೆಯಲ್ಲೇ ತಯಾರಿಸಿ, ದೇವರಿಗೆ ಅರ್ಪಿಸಿ.

ಶಿವರಾತ್ರಿಯಂದು ದೇವರಿಗೆ ಈ ನೈವೇದ್ಯಗಳನ್ನು ಅರ್ಪಿಸಿ:

ತಂಬಿಟ್ಟು:

ತಂಬಿಟ್ಟು ಶಿವನಿಗೆ ಪ್ರಿಯವಾದ ತಿನಿಸು. ಹಾಗಿರುವಾಗ ಈ ಬಾರಿಯ ಶಿವರಾತ್ರಿಯಂದು ಹುರಿಗಡಲೆ ತಂಬಿಟ್ಟು ಮಾಡಿ, ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ

ಬೇಕಾಗುವ ಸಾಮಾಗ್ರಿಗಳು: 1 ಕಪ್ ಹುರಿಗಡಲೆ, 1/2 ಕಪ್ ಒಣ ಕೊಬ್ಬರಿ ತುರಿ, ಸ್ವಲ್ಪ ಕಪ್ ಬೆಲ್ಲ, ತುಪ್ಪ, ಗಸಗಸೆ, ಏಲಕ್ಕಿ ಪುಡಿ

ತಂಬಿಟ್ಟು ಪಾಕ ವಿಧಾನ: ಮೊದಲಿಗೆ ಮಿಕ್ಸಿ ಜಾರಿನಲ್ಲಿ ಹುರಿಗಡಲೆ ಹಾಗೂ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತ ಒಂದು ಬಾಣಲೆಯನ್ನು ಬಿಸಿ ಮಾಡಿ ಒಣ ಕೊಬ್ಬರಿಯನ್ನು ಹಾಕಿ ಚೆನ್ನಾಗಿ ಹುರಿದುಕೊಂಡು, ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ವರ್ಗಾಯಿಸಿ ಒರಟಾಗಿ ರುಬ್ಬಿಕೊಳ್ಳಿ. ನಂತರದಲ್ಲಿ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಬಳಿಕ ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಬೆಲ್ಲ ಕರಗುವವರೆಗೆ ಕೈಯಾಡಿಸಿ. ಬೆಲ್ಲ ಪಾಕ ಬಂದ ನಂತರ ಇದಕ್ಕೆ ಒಣ ಕೊಬ್ಬರಿ, ಮೊದಲೇ ಪುಡಿ ಮಾಡಿ ಇಟ್ಟುಕೊಂಡ ಹುರಿಗಡಲೆ ಪುಡಿ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ಈ ಮಿಶ್ರಣಕ್ಕೆ ಹುರಿದ ಗಸಗಸೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗ್ಯಾಸ್‌ ಆಫ್‌ ಮಾಡಿ, ಸ್ವಲ್ಪ ಬಿಸಿಯಿರುವಾಗಲೇ ಉಂಡೆಗಳನ್ನು ಕಟ್ಟಿಕೊಂಡರೆ ಹತ್ತೇ ನಿಮಿಷದಲ್ಲಿ ಶಿವನಿಗೆ ಪ್ರಿಯವಾದ ತಂಬಿಟ್ಟು ರೆಡಿ.

ಮಖಾನ ಪಾಯಸ:

ಶಿವರಾತ್ರಿಯಂದು ಶಿವನಿಗೆ ಮಖಾನ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಜೊತೆಗೆ ವ್ರತ ಮಾಡುವವವರು ವ್ರತದ ಕೊನೆಯಲ್ಲಿ ಮಖಾನ ಪಾಯಸವನ್ನು ಪ್ರಸಾದವಾಗಿ ಸವಿಯುತ್ತಾರೆ. ಈ ಬಾರಿಯ ಶಿವರಾತ್ರಿಗೆ ನೀವು ಈ ನೈವೇದ್ಯ ರೆಸಿಪಿಯನ್ನು ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು: ಮಖಾನಾ 1 ಕಪ್‌, ಸಕ್ಕರೆ (ಸಿಹಿಗನುಸಾರ), ಗೋಡಂಬಿ, ದ್ರಾಕ್ಷಿ, ಬಾದಮಿ, ಏಲಕ್ಕಿ ಪುಡಿ, ಅರ್ಧ ಲೀ ಹಾಲು, ತುಪ್ಪ, ಕೇಸರಿ

ಮಖಾನಾ ಪಾಯಸ ಮಾಡುವ ವಿಧಾನ: ಮೊದಲಿಗೆ ಒಂದು ಸ್ಟೌವ್‌ ಮೇಲೆ ಪಾತ್ರೆಯನ್ನಿಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ, ತುಪ್ಪ ಕರಗಿದ ಬಳಿಕ ಮಖಾನಾ ಹಾಕಿ ಹುರಿದುಕೊಳ್ಳಿ. ಹುರಿದ ಮಖಾನಾವನ್ನು ಒಂದು ಬೌಲ್‌ಗೆ ಹಾಕಿ ಅದು ತಣ್ಣಗಾದ ಬಳಿಕ ಅದನ್ನು ತರಿತರಿಯಾಗಿ ರುಬ್ಬಿಕೊಳ್ಳಿ, ಇನ್ನೂ ಸ್ವಲ್ಪ ಮಖಾನಾವನ್ನು ಹಾಗೆಯೇ ಬೌಲ್‌ನಲ್ಲಿ ತೆಗೆದಿಡಿ ಮತ್ತು ಕಟ್‌ ಮಾಡಿದ ಗೋಡಂಬಿ, ಬಾದಾಮಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.  ಈಗ ಒಂದು ಪಾತ್ರೆಗೆ ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ ಬಳಿಕ ಅದಕ್ಕೆ ರುಬ್ಬಿದ ಮಖಾನಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಕೇಸರಿ ಮಿಶ್ರಿತ ಹಾಲುನ್ನು ಹಾಕಿ ಬಳಿಕ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ರುಬ್ಬದೆ ಇಟ್ಟುಕೊಂಡ ಮಖಾನಾ ಸೇರಿಸಿ 5 ನಿಮಿಷಗಳ ಕಾಲ ಪಾಯಸವನ್ನು ಕುದಿಸಿ, ಸ್ಟೌವ್‌ ಆಫ್‌  ಮಾಡಿ ಡ್ರೈಫ್ರೂಟ್ಸ್‌ ಸೇರಿಸಿದರೆ ಮಖಾನಾ ಪಾಯಸ ನೈವೇದ್ಯ ರೆಡಿ.

ಇದನ್ನೂ ಓದಿ: ದಿನಕ್ಕೆ 5 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ, ಅದ್ಭುತ ದೇವಸ್ಥಾನ ಎಲ್ಲಿದೆ ಗೊತ್ತಾ?

ಪಂಚಾಮೃತ:

ಶಿವ ದೇವರ ಆರಾಧನೆಯಲ್ಲಿ ಬಿಲ್ವಪತ್ರೆ ಮಾತ್ರವಲ್ಲ ಪಂಚಾಮೃತವನ್ನು ಸಹ ಅರ್ಷಿಸಲಾಗುತ್ತದೆ. ಆದ್ದರಿಂದ ಮಹದೇವನ ಕೃಪೆಗೆ ಪಾತ್ರರಾಗಲು ಮನೆಯಲ್ಲಿಯೇ ಈ ರೀತಿ ಪಂಚಾಮೃತ ಮಾಡಿ ಶಿವನಿಗೆ ಅರ್ಪಿಸಿ

ಬೇಕಾಗುವ ಸಾಮಾಗ್ರಿಗಳು: ದ್ರಾಕ್ಷಿ ಬಾದಾಮಿ, ಗೋಡಂಬಿ, ಅಂಜೂರ ಸೇರಿದಂತೆ ಒಂದಷ್ಟು ಒಣ ಹಣ್ಣು, ಸೇಬು, ಬಾಳೆಹಣ್ಣು, ದಾಳಿಂಬೆ ಹಸುವಿನ ಹಾಲು, ಮೊಸರು, ಪುಡಿಮಾಡಿದ ಸಕ್ಕರೆ ಅಥವಾ ಕಲ್ಲು ಸಕ್ಕರೆ, ಜೇನುತುಪ್ಪ ಮತ್ತು ತುಪ್ಪ.

ಪಂಚಾಮೃತ ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರ್‌ಗೆ ಅಂಜೂರ, ಗೋಡಂಬಿ, ಬಾದಾಮಿ, ಏಲಕ್ಕಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಗೆ ನಿಮ್ಮ ಅಳತೆಗೆ ತಕ್ಕಷ್ಟು ಹಾಲು, ಹುಳಿ ಇಲ್ಲದ ಮೊಸರು, ಸಿಹಿಗನುಸಾರವಾಗಿ ಜೇನುತುಪ್ಪ, ಒಂದರಿಂದ ಎರಡು ಸ್ಪೂನ್‌ ಹಸುವಿನ ತುಪ್ಪ ಹಾಕಿ ಬೆರೆಸಿಕೊಳ್ಳಿ ನಂತರ ಈ ಮಿಶ್ರಣಕ್ಕೆ ಕಟ್‌ ಮಾಡಿದ ಸೇಬು, ಬಾಳೆಹಣ್ಣು ಮತ್ತು ದಾಳಿಂಬೆ ಬೀಜಗಳನ್ನು ಸೇರಿಸಿ ಕೊನೆಯಲ್ಲಿ ಮೊದಲೇ ರುಬ್ಬಿಟ್ಟ ಡ್ರೈಫ್ರೂಟ್ಸ್‌ ಮಿಶ್ರಣವನ್ನು ಇದಕ್ಕೆ ಸೇರಿಸಿ ಬೆರೆಸಿದರೆ ಶಿವನ ನೈವೇದ್ಯಕ್ಕೆ ಪಂಚಾಮೃತ ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *