
ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದರ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಫಿಲ್ ಸಾಲ್ಟ್ ಔಟಾದ ಬಳಿಕ ಬ್ಯಾಟಿಂಗ್ಗೆ ಬಂದ ರಜತ್, ಬಂದ ಕೂಡಲೇ ಪ್ರತಿಯೊಬ್ಬ ಮುಂಬೈ ಬೌಲರ್ಗಳ ವಿರುದ್ಧ ಬೌಂಡರಿಗಳ ಮಳೆಗರೆದರು. ಇದರ ಪರಿಣಾಮವಾಗಿ ರಜತ್ ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿದರು. ರಜತ್ ತಮ್ಮ ಮುಂದಿನ ಎಸೆತದಲ್ಲಿ ಸಿಕ್ಸರ್ ಸಿಡಿಸಿ 50 ರನ್ಗಳ ಗಡಿ ದಾಟುತ್ತಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು. ಆದರೆ ಅದಕ್ಕೆ ಟ್ರೆಂಟ್ ಬೌಲ್ಟ್ ಅವಕಾಶ ಮಾಡಿಕೊಡಲಿಲ್ಲ.
ಆದಾಗ್ಯೂ ರಜತ್ ಎದುರಿಸಿದ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಎದುರಿಸಿದ 11 ಎಸೆತಗಳಲ್ಲಿ ಬರೋಬ್ಬರಿ 8 ಬೌಂಡರಿಗಳನ್ನು ರಜತ್ ಬಾರಿಸಿದರು. ಒಟ್ಟಾರೆ ಈ 8 ಎಸೆತಗಳಲ್ಲಿ ರಜತ್ 42 ರನ್ಗಳನ್ನು ಕಲೆಹಾಕಿದರು. ಅಂತಿಮವಾಗಿ ರಜತ್ 17 ಎಸೆತಗಳಲ್ಲಿ ತಮ್ಮ ಸತತ ಎರಡನೇ ಅರ್ಧಶತಕ ಬಾರಿಸಿದರು. ಸ್ಯಾಂಟ್ನರ್ ಅವರ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರಜತ್ ತಮ್ಮ ಅರ್ಧಶತಕ ಪೂರೈಸಿದರು.