
ಬಲಿಷ್ಠ ಬ್ಯಾಟಿಂಗ್ ಹಾಗೂ ತನ್ನ ಮಾರಕ ಬೌಲಿಂಗ್ ದಾಳಿಯಿಂದ 2026 ರ ಐಪಿಎಲ್‌ನಲ್ಲಿ ಏಕೈಕ ಅಜೇಯ ತಂಡವಾಗಿ ಉಳಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 57 ರನ್ಗಳಿಂದ ಹೀನಾಯವಾಗಿ ಸೋಲಿಸುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ರಾಜಸ್ಥಾನ್ ತಂಡವನ್ನು ಸನ್‌ರೈಸರ್ಸ್ ತಂಡ ಸೋಲಿಸಿತು ಎನ್ನುವುದಕ್ಕಿಂತ, ಸನ್‌ರೈಸರ್ಸ್ ತಂಡದ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಇಬ್ಬರು ಯುವ ವೇಗಿಗಳಾದ ಪ್ರಫುಲ್ ಹಿಂಗೆ ಹಾಗೂ ಸಕೀಬ್ ಹುಸೇನ್ ಅವರ ಮಾರಕ ದಾಳಿಗೆ ರಾಜಸ್ಥಾನ್ ಮಂಡಿಯೂರಿತು ಎಂದರೆ ತಪ್ಪಾಗಲಾರದು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ 216 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಇಬ್ಬರು ಯುವ ವೇಗಿಗಳ ದಾಳಿಗೆ ತತ್ತರಿಸಿ 156 ರನ್ಗಳಿಗೆ ಆಲೌಟ್ ಆಯಿತು. ಸನ್‌ರೈಸರ್ಸ್ ಪರ ಪ್ರಫುಲ್ 4 ವಿಕೆಟ್ ಪಡೆದರೆ, ಸಕೀಬ್ 4 ವಿಕೆಟ್ ಕಬಳಿಸಿದರು.