Headlines

T20 World Cup: ಬದಲಿ ತಂಡವಾಗಿ ಬಂದು ಈ ಆವೃತ್ತಿಯ ಮೊದಲ ದ್ವಿಶತಕ ಬಾರಿಸಿದ ಸ್ಕಾಟ್ಲೆಂಡ್ – Kannada News | Unexpected Entry, Dominant Win: Scotland Crushes Italy with T20 World Cup 2026 Highest Total

2026 ರ ಟಿ20 ವಿಶ್ವಕಪ್​ನ (T20 World Cup 2026) ಮೂರನೇ ದಿನದಾಟದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಟಲಿ (Scotland vs Italy) ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಈ ಉಭಯ ತಂಡಗಳ ಕಾಳಗದ ಮೇಲೆ ಅಷ್ಟು ನಿರೀಕ್ಷೆಗಳಿರಲಿಲ್ಲ. ಆದರೆ ಇಟಲಿಗೆ ಹೋಲಿಸಿಕೊಂಡರೆ ಕೊಂಚ ಬಲಿಷ್ಠವಾಗಿ ಕಾಣುತ್ತಿದ್ದ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸ್ಕಾಟ್ಲೆಂಡ್ 20 ಓವರ್​ಗಳಲ್ಲಿ ಬರೋಬ್ಬರಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಟಲಿ 134 ರನ್​ಗಳಿಗೆ ಆಲೌಟ್ ಆಗುವ ಮೂಲಕ 73 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಬದಲಿ ತಂಡವಾಗಿ ಬಂದ ಸ್ಕಾಟ್ಲೆಂಡ್

ವಾಸ್ತವವಾಗಿ ಈ ಬಾರಿಯ ಟಿ20 ವಿಶ್ವಕಪ್​ಗೆ ಸ್ಕಾಟ್ಲೆಂಡ್ ತಂಡ ಅರ್ಹತೆ ಪಡೆದಿರಲಿಲ್ಲ. ಆದರೆ ಬಯಸದೆ ಬಂದ ಭಾಗ್ಯದಂತೆ ಬಾಂಗ್ಲಾದೇಶ ಟಿ20 ವಿಶ್ವಕಪ್​ನಿಂದ ತನ್ನ ಹೆಸರನ್ನು ಹಿಂಪಡೆದುದರಿಂದ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಇಟಲಿ ತಂಡವನ್ನು ಎದುರಿಸಿತು.

ಸ್ಕಾಟ್ಲೆಂಡ್​ಗೆ ಭರ್ಜರಿ ಆರಂಭ

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಸ್ಕಾಟ್ಲೆಂಡ್ ತಂಡಕ್ಕೆ ಉತ್ತಮ ಜೊತೆಯಾಟ ಸಿಕ್ಕಿತು. ಮೊದಲ ವಿಕೆಟ್​ಗೆ ತಂಡ 126 ರನ್​ಗಳ ಜೊತೆಯಾಟ ಕಂಡಿತು. ಆರಂಭಿಕರಾದ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 14 ಓವರ್​ಗಳ ಒಳಗೆ ತಂಡವನ್ನು 126 ರನ್​ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ ಮುನ್ಸೆ 54 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 84 ರನ್ ಬಾರಿಸಿ ಔಟಾದರು. ಇದರೊಂದಿಗೆ ಇವರಿಬ್ಬರ ಜೊತೆಯಾಟವೂ ಮುರಿದುಬಿತ್ತು.

200 ರನ್ ದಾಟಿದ ಮೊದಲ ತಂಡ

ಆ ಬಳಿಕ ಜೋನ್ಸ್ ಜೊತೆಯಾದ ಬ್ರಾಂಡನ್ ಮೆಕ್‌ಮುಲ್ಲೆನ್ ಉತ್ತಮ ಜೊತೆಯಾಟ ಕಟ್ಟಿದರು. ಜೋನ್ಸ್ 37 ರನ್ ಬಾರಿಸಿ ಔಟಾದರೆ, ಮೆಕ್‌ಮುಲ್ಲೆನ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 41 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮೈಕೆಲ್ ಲೀಸ್ಕ್ 22 ರನ್ ಬಾರಿಸಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. 200 ರನ್​ಗಳ ಗಡಿ ದಾಟುವುದರೊಂದಿಗೆ ಸ್ಕಾಟ್ಲೆಂಡ್ ತಂಡ ಈ ಆವೃತ್ತಿಯಲ್ಲಿ 200 ಕ್ಕೂ ಅಧಿಕ ರನ್​ ಕಲೆಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೆ 7 ಪಂದ್ಯಗಳು ನಡೆದಿದ್ದು, ಈ ಹಿಂದಿನ ಅತ್ಯಧಿಕ ಸ್ಕೋರ್ 184 ರನ್ ಆಗಿತ್ತು. ಅದು ನೇಪಾಳ ವಿರುದ್ಧ ಇಂಗ್ಲೆಂಡ್ ಕಲೆಹಾಕಿದ್ದ ಮೊತ್ತವಾಗಿತ್ತು.

T20 World Cup: ಟಿ20 ವಿಶ್ವಕಪ್​ನಿಂದ 7 ಸ್ಟಾರ್ ಆಟಗಾರರು ಔಟ್

134 ರನ್​​ಗಳಿಗೆ ಇಟಲಿ ಆಲೌಟ್

ಇನ್ನು 207 ರನ್​ಗಳ ಗುರಿ ಬೆನ್ನಟ್ಟಿದ ಇಟಲಿ ತಂಡದ ಅನಾನುಭವ ಎದ್ದು ಕಾಣಿಸುತ್ತಿತ್ತು. ಮೊದಲ ಎಸೆತದಲ್ಲೇ ತಂಡದ ಮೊದಲ ವಿಕೆಟ್ ಪತನವಾಯಿತು. ತಂಡದ ಪರ ಅರ್ಧಶತಕ ಬಾರಿಸಿ ಹೋರಾಟದ ಇನ್ನಿಂಗ್ಸ್ ಆಡಿದ ಬೆಂಜಮಿನ್ ಮಾನೆಂಟಿ 52 ರನ್​ ಬಾರಿಸಿದರೆ, ಹ್ಯಾರಿ ಮಾನೆಂಟಿ 37 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಇಟಲಿ 100 ರನ್​ಗಳ ಗಡಿ ದಾಟಿತು. ಅಂತಿಮವಾಗಿ 16.4 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಇಟಲಿ 134 ರನ್​ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *