ಟಿ20 ವಿಶ್ವಕಪ್ನ 15ನೇ ಅಭ್ಯಾಸ ಪಂದ್ಯದಲ್ಲಿ ಇಟಲಿ ತಂಡವು ಭರ್ಜರಿ ಜಯ ಸಾಧಿಸಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿರುವ ಇಟಲಿ ತಂಡವು ಯುಎಇ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಇಟಲಿ ತಂಡದ ಪರ ಆಂಥೊನಿ ಮೊಸ್ಕಾ 22 ಎಸೆತಗಳಲ್ಲಿ 56 ರನ್ ಸಿಡಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಇಟಲಿ ತಂಡವು 20 ಓವರ್ಗಳಲ್ಲಿ 193 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡ 18.2 ಓವರ್ಗಳಲ್ಲಿ 81 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಇಟಲಿ ತಂಡವು 112 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಟಲಿ ಪಡೆ ಟಿ20 ವಿಶ್ವಕಪ್ನ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸೂಚನೆ ನೀಡಿದ್ದಾರೆ.
ಇತ್ತ ಇಟಲಿ ತಂಡದ ಭರ್ಜರಿ ಗೆಲುವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಳಿಗೆ ಮುನ್ನೆಚರಿಕೆ ಎನ್ನಬಹುದು. ಏಕೆಂದರೆ ಗ್ರೂಪ್-3 ನಲ್ಲಿ ಸ್ಥಾನ ಪಡೆದಿರುವ ಇಟಲಿ ಮೊದಲ ಸುತ್ತಿನಲ್ಲಿ ಈ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಈ ತಂಡಗಳ ವಿರುದ್ಧ ಕೂಡ ಇಟಲಿ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.