
ಟಿ20 ವಿಶ್ವಕಪ್ ಮುಕ್ತಾಯಗೊಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನ್ಯೂಝಿಲೆಂಡ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇತ್ತ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ 27.56 ಕೋಟಿ ರೂ. ಬಹುಮಾನ ಮೊತ್ತ ಸಿಕ್ಕರೆ, ಅತ್ತ ನ್ಯೂಝಿಲೆಂಡ್ಗೆ 14.70 ಕೋಟಿ ರೂ. ಲಭಿಸಿದೆ.
ಇನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸಂಜು ಸ್ಯಾಮ್ಸನ್ ಪಾಲಾದರೆ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಜಸ್ಪ್ರೀತ್ ಬುಮ್ರಾ ಪಡೆದಿದ್ದರು. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ಪಂದ್ಯದ ವೇಳೆ ಕಾಣಿಸಿಕೊಂಡ ಹುಂಡೈ ಕಾರ್ ಸಿಕ್ಕಿದ್ದು ಯಾರಿಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಾರ್ ಸಿಕ್ಕಿದ್ದು ಯಾರಿಗೆ?
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಅಧಿಕೃತ ಪಾಲುದಾರರಾಗಿ ಹ್ಯುಂಡೈ ಕಂಪನಿ ಕಾಣಿಸಿಕೊಂಡಿದ್ದರು. ಅಲ್ಲದೆ ಪ್ರತಿ ಪಂದ್ಯದ ವೇಳೆ ಮೈದಾನದಲ್ಲಿ Creta ಕಾರನ್ನು ಪ್ರದರ್ಶಿಸಲಾಗಿತ್ತು. ಇದಾಗ್ಯೂ ಈ ಕಾರನ್ನು ಪ್ರಶಸ್ತಿಯಾಗಿ ನೀಡಲಾಗಿಲ್ಲ ಎಂಬುದೇ ಸತ್ಯ.
ಅಂದರೆ ಟಿ20 ವಿಶ್ವಕಪ್‌ನಲ್ಲಿ ಯಾವುದೇ ಆಟಗಾರನಿಗೆ ಅಧಿಕೃತವಾಗಿ ಕಾರನ್ನು ಬಹುಮಾನವಾಗಿ ನೀಡಲಾಗಿಲ್ಲ. ಇಲ್ಲಿ ಹುಂಡೈ ಕಂಪೆನಿಯು ಕ್ರೆಟಾ ಕಾರನ್ನು ಕೇವಲ ಜಾಹೀರಾತಿಗಾಗಿ ಬಳಸಿದ್ದಾರೆ. ಇದರ ಹೊರತಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅಥವಾ ಪ್ಲೇಯರ್ ಆಫ್ ದಿ ಮ್ಯಾಚ್ಗೆ ಕಾರ್ ನೀಡುವುದಾಗಿ ತಿಳಿಸಿರಲಿಲ್ಲ.
ಇದಾಗ್ಯೂ ಈ ಬಾರಿಯ ಟೂರ್ನಿಯಲ್ಲಿ 321 ರನ್ಗಳಿಸಿರುವ ಸಂಜು ಸ್ಯಾಮ್ಸನ್ ಅವರಿಗೆ ಕಾರು ನೀಡಲಾಗಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇವೆಲ್ಲವೂ ಫೇಕ್ ನ್ಯೂಸ್. ಬದಲಾಗಿ ಐಸಿಸಿ ಟೂರ್ನಿಯಲ್ಲಿ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುತ್ತಿಲ್ಲ ಎಂಬುದೇ ಸತ್ಯ.
ಈ ಹಿಂದೆ ನೀಡಲಾಗಿತ್ತೇ?
ಐಸಿಸಿ ತನ್ನ ಅಧಿಕೃತ ಟೂರ್ನಿಗಳಲ್ಲಿ ಸಾಮಾನ್ಯವಾಗಿ ಆಟಗಾರರಿಗೆ ಕಾರನ್ನು ಬಹುಮಾನವಾಗಿ ನೀಡುವುದಿಲ್ಲ. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಪ್ರಮುಖ ಸಂದರ್ಭಗಳಲ್ಲಿ ಪ್ರಾಯೋಜಕರು ಅಥವಾ ಖಾಸಗಿ ಸಂಸ್ಥೆಗಳು ಆಟಗಾರರಿಗೆ ಕಾರನ್ನು ಉಡುಗೊರೆಯಾಗಿ ನೀಡಿವೆ.
ಅದರಲ್ಲ 1985ರಲ್ಲಿ ನಡೆದ 7 ತಂಡಗಳ ನಡುವಣ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (ಇದು ಐಸಿಸಿ ಟೂರ್ನಿ ಅಲ್ಲ) ರವಿಶಾಸ್ತ್ರಿ ಅವರು ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿ ಗೆದ್ದು Audi 100 ಕಾರನ್ನು ಪಡೆದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಕಾರು ಬಹುಮಾನವಾಗಿದೆ.
ಇದನ್ನೂ ಓದಿ: IPL 2026: ಹೆಚ್ಚುವರಿ ಪಂದ್ಯಗಳು… ಐಪಿಎಲ್ನಲ್ಲಿ ಮಹತ್ವದ ಬದಲಾವಣೆ
ಹಾಗೆಯೇ ಐಪಿಎಲ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುವ ಆಟಗಾರನಿಗೆ ಟೂರ್ನಿಯ ಪ್ರಾಯೋಜಕರಾದ ಟಾಟಾ ಕಂಪೆನಿ ಪ್ರತಿ ಸೀಸನ್ಗಳಲ್ಲೂ ಕಾರನ್ನು ಬಹುಮಾನವಾಗಿ ನೀಡುತ್ತಾರೆ. ಅದರಂತೆ ಕಳೆದ ಬಾರಿ 206.55 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ ಟಾಟಾ ಕರ್ವ್ ಕಾರನ್ನು ಪ್ರಶಸ್ತಿಯಾಗಿ ಪಡೆದಿದ್ದರು.